ಬೆಂಗಳೂರು: ಸಮರ್ಥ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಆಯುಷ್ ಪದ್ಧತಿಯ ಮುಖಾಂತರ ಜನರಿಗೆ ತಲುಪಿಸಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಆಯುಷ್ ಪದ್ಧತಿಯ ಮೂಲಕ ಸಾರ್ವಜನಿಕ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳ ಪೂರೈಕೆ ಕುರಿತು ನಗರದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ 'ಜಿಜ್ಞಾಸಾ'ದಲ್ಲಿ ಮಾತನಾಡಿದ ಸಚಿವರು, ಕೋವಿಡ್ ನಂತರದ ಪರಿಸ್ಥಿತಿಯು ಜಗತ್ತನ್ನು ಭೌತಿಕವಾಗಿ ದೂರವಿಟ್ಟಿದ್ದು, ಎಲ್ಲವೂ ವರ್ಚುವಲ್ ಆಗಿವೆ. ಆದರೆ ಈ ರೂಪವು ಹೆಚ್ಚು ಪರಿಣಾಮಕಾರಿ ಎನ್ನುವುದು ಕೂಡ ಈಗ ಸಾಬೀತಾಗಿದೆ. ಸಮಸ್ಯೆಗಳಿಗೆ ಹೆದರದೆ ನಾವು ಅವುಗಳನ್ನು ಎದುರಿಸಿ, ಸರಿಯಾದ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಹೇಳಿದರು.
ಇದನ್ನೂ ಓದಿ: ಭದ್ರಾವತಿ ಖಾಸಗಿ ನರ್ಸಿಂಗ್ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ: ಕಾಲೇಜು ಸೀಲ್ಡೌನ್
ಆಯುಷ್ ಪದ್ಧತಿಯಲ್ಲಿನ ಚಿಕಿತ್ಸೆಗಳ ಮೂಲಕ ಮನುಷ್ಯನ ಆರೋಗ್ಯವನ್ನು ಹೇಗೆ ಪರಿಪೂರ್ಣವಾಗಿ ಕಾಪಾಡಬಹುದು ಎನ್ನುವುದು ನಮ್ಮ ಪ್ರಾಚೀನ ವಿಜ್ಞಾನದಲ್ಲಿ ಇದೆ. ಈಗ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು, ಸಮಗ್ರ ಬೆಳವಣಿಗೆಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಮೂಲಕ ನಾವು ಇಡೀ ಜಗತ್ತನ್ನು ತಲುಪಬಹುದು. ಇದರಲ್ಲಿ ನಾವು ಮುಂಚೂಣಿಯಲ್ಲಿರುವುದೇ ಕರ್ನಾಟಕ ರಾಜ್ಯದ ಮತ್ತು ಬೆಂಗಳೂರಿನ ಶಕ್ತಿಯಾಗಿದೆ. ಆಯುಷ್ ಪದ್ಧತಿಯ ಮೂಲಕ ಇಡೀ ಜಗತ್ತು ಭಾರತದ ಕಡೆಗೆ ನೋಡುವಂತೆ ಮಾಡಬೇಕು ಎಂದು ಹೇಳಿದರು.