ಬೆಂಗಳೂರು: ಪತ್ನಿ, ಪುತ್ರಿಗೆ ಕೊರೊನಾ ದೃಢಪಟ್ಟ ಕಾರಣದಿಂದ ನಾನು ಇಷ್ಟು ದಿನ ಕ್ವಾರಂಟೈನ್ನಲ್ಲಿದ್ದೆ. ನನಗೂ ಎರಡು ಬಾರಿ ಸೋಂಕು ಪರೀಕ್ಷೆ ನಡೆದಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿನ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಹಾಗೂ ಆಸ್ಪತ್ರೆಗಳ ಜೊತೆಗಿನ ಸಭೆಗೆ ಆಗಮಿಸಿದ ಅವರು, ಮಾಧ್ಯಮಗಳ ಜೊತೆ ಮಾತನಾಡುತ್ತಾ, ಈಗ ಕ್ವಾರಂಟೈನ್ ಮುಗಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಪತ್ನಿ ಹಾಗೂ ಪುತ್ರಿ ಕೂಡ ಡಿಸ್ಚಾರ್ಜ್ ಆಗುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಯಾರೂ ಆತಂಕ ಪಡಬೇಡಿ. ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜುಲೈನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ನಾನು ಈ ಮೊದಲೇ ಹೇಳಿದ್ದೆ. ಯಾರೂ ಕೂಡಾ ಆತಂಕ ಪಡಬೇಡಿ ಎಂದು ಹೇಳಿದರು.