ಬೆಂಗಳೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಘಟನೆ ತೀವ್ರ ಆಘಾತ ತಂದಿದ್ದು, ಅವರ ಕುಟುಂಬದ ಸದಸ್ಯರಿಗೆ ಶಾಶ್ವತವಾದ ಪರಿಹಾರವನ್ನು ಸರ್ಕಾರ ಖಂಡಿತವಾಗಿಯೂ ನೀಡುತ್ತದೆ. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಮತ್ತಷ್ಟು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ ನೀಡಿದ್ದಾರೆ.
ಇನ್ನು, ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿಸುವುವುದು ಅಮಾನವೀಯವಾಗುತ್ತದೆ. ವೈದ್ಯಕೀಯ ಸಂಘದ ಎಲ್ಲಾ ಆತ್ಮೀಯರಿಗೆ ಮನವಿ ಮಾಡುವುದೇನೆಂದರೆ, ನಾಗೇಂದ್ರ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ಆದ್ಯತೆ ಕೊಡಿ. ಅವರ ಕುಟುಂಬ ವರ್ಗದವರಿಗೆ ಮುಖ್ಯಮಂತ್ರಿ ಬಿಎಸ್‌ವೈ ಜೊತೆ ಚರ್ಚೆಸಿ, ನ್ಯಾಯ ಕೊಡಿಸುತ್ತೇವೆ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪ್ರಾಣವನ್ನು ಹಿಂದಿರುಗಿ ತರಲು ಸಾಧ್ಯವಿಲ್ಲವೆಂದು ಗೊತ್ತಿದೆ. ಆದರೆ, ಅವರ ಕುಟುಂಬದ ಸದಸ್ಯರಿಗೆ ಶಾಶ್ವತವಾದ ಪರಿಹಾರವನ್ನು ಸರ್ಕಾರ ಖಂಡಿತವಾಗಿಯೂ ನೀಡುತ್ತದೆ. ಎಲ್ಲಾ ಕೋವಿಡ್ ವಾರಿಯರ್ಸ್ ಜೊತೆ ಸರ್ಕಾರವಿದೆ ಎಂದು ಅಭಯ ನೀಡಿದ್ದಾರೆ.
ಯಾರೂ ಕೂಡಾ ನಾಗೇಂದ್ರ ಅವರ ಸಾವನ್ನು ಅನ್ಯ ಕಾರಣಗಳಿಗೆ ದುರ್ಬಳಕೆ ಮಾಡಬಾರದು ಎಂದು ಕಳಕಳಿಯ ಮನವಿ ಮಾಡುತ್ತಿದ್ದೇನೆ. ಈಗಾಗಲೇ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಮತ್ತಷ್ಟು ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಆಶ್ವಾಸನೆ ನೀಡಿದ್ದಾರೆ.
ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಕೂಡಲೇ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.