ಬೆಂಗಳೂರು: ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಈಗಾಗಲೇ ಕೆಲಸ ಶುರುಮಾಡಿದ್ದು, ಬಿಬಿಎಂಪಿ ಕೇಂದ್ರ ಕಚೇರಿಯಿಂದಲೇ ತಪಾಸಣೆ ಕಾರ್ಯಾರಂಭಿಸಿದ್ದಾರೆ.
ಮೇಯರ್ ಗೌತಮ್ ಕುಮಾರ್, ಉಪಮೇಯರ್ ರಾಮ್ ಮೋಹನ್ ರಾಜು ಖುದ್ದಾಗಿ ಮೇಯರ್ ಕಚೇರಿಯ ಕೆಳ ಮಹಡಿಯ ಲೆಕ್ಕಾಧಿಕಾರಿ ಕಚೇರಿ, ಸಿಬ್ಬಂದಿ ಕೊಠಡಿ ಮತ್ತು ಶೌಚಾಲಯದ ತುರ್ತು ತಪಾಸಣೆ ಕೈಗೊಂಡರು.
ಪಾಲಿಕೆ ಸದಸ್ಯರು ಸೇರಿದಂತೆ ನೌಕರರು ಬಳಸುವ ಶೌಚಾಲಯ ಸ್ವಚ್ಛವಾಗಿಲ್ಲ. ಇದನ್ನು ಸುಸ್ಥಿತಿಯಲ್ಲಿ ಇಡುವಂತೆ ತಿಳಿಸಿದರು. ಇದಕ್ಕೂ ಮುನ್ನ ಅಧಿಕಾರಿಗಳು, ವಿಶೇಷ ಆಯುಕ್ತರ ಜತೆ ಮೇಯರ್ ಸಭೆ ನಡೆಸಿದ್ದು, ಪಾಲಿಕೆ ವ್ಯಾಪ್ತಿಯ ಕಾಮಗಾರಿಗಳಿಗೆ ವೇಗ ನೀಡಬೇಕು. ವಿಶೇಷ ಆಯುಕ್ತರು ಕೇಂದ್ರ ಕಚೇರಿಯಲ್ಲೇ ಇರುವ ಬದಲು, ವಲಯಗಳಿಗೆ ಹೋಗಿ ಸಭೆ ನಡೆಸಬೇಕು. ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಾರ್ವಜನಿಕರು ಬಿಬಿಎಂಪಿ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ತಜ್ಞರ ಸಲಹೆ ಪಡೆಯಲಾಗುವುದು. ನಗರದಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಂಭವವಿದೆ. ಹಾಗಾಗಿ ಅಧಿಕಾರಿಗಳು ರಾತ್ರಿ ಪಾಳೆಯದಲ್ಲಿ ಕಾರ್ಯನಿರ್ವಹಿಸಬೇಕು. ಇಂದಿರಾ ಕ್ಯಾಂಟೀನ್ ಬಗ್ಗೆ ಸರ್ಕಾರದ ಜೊತೆ ಚರ್ಚೆಸಲಾಗುವುದು ಎಂದು ಗೌತಮ್ ಕುಮಾರ್ ತಿಳಿಸಿದರು.