ಬೆಂಗಳೂರು: ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರು ಜೆಡಿಎಸ್ ತೊರೆಯಲಿದ್ದಾರೆ ಎಂಬ ವಿಚಾರದ ಮೇಲೆ ಅವರ ಅನುಪಸ್ಥಿತಿಯಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ವಿಧಾನ ಪರಿಷತ್ನಲ್ಲಿ ಪ್ರಸಕ್ತ ಹಣಕಾಸು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಈ ವಿಚಾರ ಪ್ರಸ್ತಾಪಿಸಿದರು. ನನಗೆ ಎರಡು ದಿನದಿಂದ ಕಾಲಾವಕಾಶ ಲಭಿಸಿ ಕೈತಪ್ಪಿ ಹೋಗುತ್ತಿತ್ತು. ನಿನ್ನೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರ ನಂತರ ನನಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಪೂರ್ಣ ಅವಧಿ ಅವರೇ ಅಬ್ಬರಿಸಿದರು. ಯಾಕೆ ಸರ್ಕಾರದ ಮೇಲೆ ಅವರು ಅಷ್ಟು ಆಕ್ರೋಶ ವ್ಯಕ್ತಪಡಿಸಿದರೋ ತಿಳಿಯುತ್ತಿಲ್ಲ ಎಂದರು.
ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಗೆ ವಿಶೇಷವಾದ ಸಿಟ್ಟಿದ್ದರೆ ತಪ್ಪಿಲ್ಲ. ಆದರೆ ನಮ್ಮ ಸ್ನೇಹ ಹಸ್ತ ಚಾಚಿರುವ ಜೆಡಿಎಸ್ ಸದಸ್ಯರಾಗಿರುವ ಮರಿತಿಬ್ಬೇಗೌಡರು ಯಾಕೆ ಅಷ್ಟು ಉಗ್ರವಾಗಿ ಮಾತನಾಡಿದರು ಅಂತ ತಿಳಿದಿಲ್ಲ. ಬಹುಶಃ ಅವರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದರಿಂದ ಸಹಜವಾಗಿ ಕಾಂಗ್ರೆಸ್‌ದತ್ತ ವಾಲಿರಬಹುದು ಎಂದರು. ಮಾತಿನ ಮಧ್ಯೆ ಜೆಡಿಎಸ್ ಸದಸ್ಯ ರಮೇಶ್ ಗೌಡ ಮಧ್ಯಪ್ರವೇಶಿಸಿ ಮರಿತಿಬ್ಬೇಗೌಡ ಕಾಂಗ್ರೆಸ್ ಗೆ ಹೋಗುತ್ತಾರೆ ಅನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿದ್ದೀರಾ ಎಂದರು.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಹಿಂದೆ ಅವರು ಕಾಂಗ್ರೆಸ್ ನಲ್ಲಿಯೇ ಇದ್ದರು ಎಂಬ ಸಮಜಾಯಿಷಿ ನೀಡಿದರು. ಸಭಾಪತಿ ಬಸವರಾಜ್ ಹೊರಟ್ಟಿ ಆ ರೀತಿ ಮಾತನಾಡದಂತೆ ಮತ್ತೊಮ್ಮೆ ತಾಕೀತು ಮಾಡಿದರು. ಆಮೇಲೆ ಪ್ರತಾಪ್ ನಾಯಕರನ್ನು ಉದ್ದೇಶಿಸಿ ಯಾರ್ಯಾರು ಯಾವಾಗ ಯಾವ ಪಕ್ಷದಲ್ಲಿ ಇರುತ್ತಾರೆ ಎಂದು ಹೇಳಲಾಗದು ಎಂದು ಚರ್ಚೆಗೆ ಕೊನೆ ಹಾಡಿದರು.
ಒಟ್ಟಾರೆ ಮರಿತಿಬ್ಬೇಗೌಡರು ಜೆಡಿಎಸ್ ತೊರೆಯಲಿದ್ದಾರೆ ಎಂಬ ವಿಷಯದ ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು. ಇದನ್ನು ಸಮರ್ಥಿಸಿಕೊಳ್ಳಲು ಇಲ್ಲವೇ ಅಲ್ಲಗಳೆಯಲು ಮರಿತಿಬ್ಬೇಗೌಡ ರು ಸದನದಲ್ಲಿ ಇರಲಿಲ್ಲ. ಇದಾದ ಬಳಿಕ ಪ್ರತಾಪ್ ಸಿಂಹ ನಾಯಕ್ ಪ್ರಸಕ್ತ ಬಜೆಟ್ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೋವಿಡ್ ಆತಂಕದಿಂದ ಕಂಗೆಟ್ಟಿದ್ದ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ಲಕ್ಷಾಂತರ ಮಂದಿಗೆ ಆಹಾರದ ಕಿಟ್ ನೀಡಲಾಗಿದೆ. ದೇಶದ ಭವಿಷ್ಯದ ಬಗ್ಗೆ ನಿರಾಶಾವಾದದ ಮಾತು ಕೇಳಿ ಬರುತ್ತಿದೆ. ಜನ ಮೆಚ್ಚಿ ಆಶೀರ್ವಾದದ ಮೇಲೆ ಹಕ್ಕಿನ ಮೇಲೆ ಬಂದು ಅಧಿಕಾರ ನಡೆಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಇದಕ್ಕಿಂತ ಒಳ್ಳೆಯ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಆದ್ಯತೆ ಆಧಾರದ ಮೇಲೆ ಎಲ್ಲಾ ವರ್ಗಕ್ಕೂ ಮಾನ್ಯತೆ ನೀಡಲಾಗಿದೆ ಎಂದರು.
ನಿರಂತರವಾಗಿ ಚರ್ಚೆಯಲ್ಲಿ ಕೇಂದ್ರ ಸರ್ಕಾರದ ವಿಚಾರವನ್ನೇ ಹೆಚ್ಚು ಪ್ರಸ್ತಾಪಿಸಿದ್ದಕ್ಕೆ ಪ್ರತಿಪಕ್ಷ ನಾಯಕರು ಅಸಹನೆ ವ್ಯಕ್ತಪಡಿಸಿದರು. ರಾಜ್ಯ ಬಜೆಟ್ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದರು.
ಗೋಹತ್ಯೆ ನಿಷೇಧ ವಿಚಾರದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯುವ ಘೋಷಣೆ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಗೋವಿನ ಉಳಿವು ಅತ್ಯಗತ್ಯ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಸುತ್ತಲಿನ ಜಿಲ್ಲೆಯ ಅಡಿಕೆ ಬೆಳೆಯ ಹಳದಿ ಎಲೆ ರೋಗಕ್ಕೆ ಪರಿಹಾರ ಹುಡುಕಲು 25 ಕೋಟಿ ರೂ. ಮೀಸಲಿಟ್ಟಿದ್ದನ್ನು ಸ್ವಾಗತಿಸುತ್ತೇನೆ. ಅಲ್ಲದೇ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಘೋಷಣೆಯನ್ನೂ ಸ್ವಾಗತಿಸುತ್ತೇನೆ ಎಂದರು.