ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ತೀವ್ರ ಮಳೆಹಾನಿಯಾಗಿದ್ದು, ಕೂಡಲೇ ಅಲ್ಲಿನ ರೈತಾಪಿ ಜನರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಮತ್ತು ಗಂಜಿ ಕೇಂದ್ರಗಳ ಜೊತೆಗೆ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಂಸದೆ ಸುಮಲತಾ ಅಂಬರೀಶ್ ಮನವಿ ಸಲ್ಲಿಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ರೇಸ್ ವ್ಯೂ ಕಾಟೇಜ್ಗೆ ಮಂಡ್ಯ ಸಂಸದೆ ಸುಮಲತಾ ಭೇಟಿ ನೀಡಿದ್ದರು. ಸಿಎಂ ಜೊತೆ ಮಳೆಹಾನಿ ಕುರಿತು ಚರ್ಚೆ ನಡೆಸಿದರು. ಭಾರಿ ಮಳೆಯಿಂದ ಜಿಲ್ಲೆಯ ಬಡ ರೈತರು ಲಕ್ಷಾಂತರ ಮೌಲ್ಯದ ಬೆಳೆ, ಮನೆ ಹಾಗೂ ಜಾನುವಾರುಗಳ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಕೂಡಲೇ ರೈತಾಪಿ ಜನರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ಗಂಜಿ ಕೇಂದ್ರಗಳ ಜೊತೆಗೆ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಪಘಾತದಲ್ಲಿ ಬಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮುತ್ತಮ್ಮ ಮತ್ತು ಅವರ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರಿಗೆ ತಮ್ಮ ವಿಶೇಷ ಅನುದಾನದ ಅಡಿಯಲ್ಲಿ ಪರಿಹಾರ ನೀಡುವಂತೆಯೂ ಸುಮಲತಾ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಿಎಂ ಶೀಘ್ರದಲ್ಲಿ ಗಮನ ಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.