ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ 3ನೇ ಅಲೆಯ ಆತಂಕ ಜೋರಾಗಿದೆ. ಮಕ್ಕಳು ವೃದ್ಧರೆನ್ನದೆ ಪರಿಣಾಮ ಬೀರುತ್ತಿರುವ ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸಲು ಪಾಲಿಕೆ ಹಲವು ಮುಖ್ಯ ಕ್ರಮಗಳನ್ನು ಕೈಗೊಂಡಿದೆ.
ಬಿಬಿಎಂಪಿಯಿಂದ ಕೋವಿಡ್-19 ಮೂರನೇ ಅಲೆ ತಡೆಗೆ ಸಿದ್ಧತೆ ಹಾಗೂ ಕೆಲ ಮುಖ್ಯ ಮಾಹಿತಿ
1. ಕಣ್ಗಾವಲು(ನಿಗಾ) ಮತ್ತು ನಿರ್ವಹಣೆ:
- ಬಿಬಿಎಂಪಿ ಮುಖ್ಯ ಕಚೇರಿಯ ಕೇಂದ್ರ ವಾರ್ ರೂಂ 24/7 ಕೆಲಸ
- ಎಲ್ಲಾ 8 ವಲಯವಾರು ನಿಯಂತ್ರಣ ಕೊಠಡಿಗಳು 24/7 ಕೆಲಸ
- 27 ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಂದೊಂದು ನಿಯಂತ್ರಣ ಕೊಠಡಿಗಳನ್ನು ಇತ್ತೀಚೆಗೆ ಸ್ಥಾಪನೆ
- ಎಲ್ಲ ಪಾಸಿಟಿವ್ ಪ್ರಕರಣಗಳ ದತ್ತಾಂಶ ಸಂಗ್ರಹ ಮತ್ತು ಪ್ರತಿ 27 ಆರೋಗ್ಯವೈದ್ಯಾಧಿಕಾರಿ ವ್ಯಾಪ್ತಿ, ಎಲ್ಲ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ, ಐಸೋಲೇಷನ್ ನಿಗಾ ಮತ್ತು ಫಿಸಿಕಲ್ ಟ್ರಯಾಜಿಂಗ್‌ಗಾಗಿ ಹಂಚಿಕೆ
- ಈ ಉದ್ದೇಶಕ್ಕಾಗಿ 35 ಮಂದಿ ಅಧಿಕಾರಿಗಳ ಲಾಗಿನ್‌ನೊಂದಿಗೆ ಇಂಡೆಕ್ಸ್ ಡೇಟಾಬೇಸ್ ಬಳಕೆ
- ದೈನಂದಿನ ಪಾಸಿಟಿವ್ ಪ್ರಕರಣಗಳು, ಟ್ರಯಾಜಿಂಗ್ ಮತ್ತು ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ ನಿತ್ಯ ನಿಗಾ
- ಕಳೆದ 15 ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು 200 ರಿಂದ 15,000ಕ್ಕೆ ಏರಿಕೆ
- ಈ ಅಲೆಯಲ್ಲಿ ಆಮ್ಲಜನಕ ಮಟ್ಟದ ಕುಸಿತದ ಸಮಸ್ಯೆ ಕಂಡು ಬರುತ್ತಿಲ್ಲ
- ಮಕ್ಕಳ ಪ್ರಕರಣಗಳು ಒಟ್ಟಾರೆಯಾಗಿ ಶೇ.12ರಷ್ಟಿದೆ
- ದೈನಂದಿನ ಪರೀಕ್ಷೆ ಸಂಖ್ಯೆಯನ್ನು 80,000 ದಿಂದ 1.3 ಲಕ್ಷಕ್ಕೆ ಹೆಚ್ಚಳ
- ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ(12-01-2022ರಂತೆ) 483 ಇದೆ(ಟಾಪ್ 3: ಮಹದೇವಪುರ- 165, ಬೊಮ್ಮನಹಳ್ಳಿ- 114, ದಕ್ಷಿಣ- 53)
2. ಟ್ರಯಾಜ್ ವ್ಯವಸ್ಥೆ:
- ವಿಧಾನಸಭಾ ಕ್ಷೇತ್ರಗಳಲ್ಲಿನ ನಿಯಂತ್ರಣ ಕೊಠಡಿಗಳಿಂದ ಟೆಲಿ ಟ್ರಯಾಜಿಂಗ್ ಮಾಡಲಾಗುತ್ತಿದೆ(ಕರೆ ಮುಖಾಂತರ)
- ದೂರವಾಣಿ ಕರೆ ಮುಖಾಂತರ ವಿಳಾಸ ಪರಿಶೀಲಿಸಿ ಆರೋಗ್ಯ ಪರಿಸ್ಥಿತಿ ವಿಚಾರಿಸಿ, ಡೇಟಾಬೇಸ್‌ನಲ್ಲಿ ದಾಖಲು
- ಎಲ್ಲ ಪಾಸಿಟಿವ್ ಪ್ರಕರಣಗಳಲ್ಲಿ ಪರೀಕ್ಷೆ ಫಲಿತಾಂಶದ 24 ಗಂಟೆಗಳ ಒಳಗೆ ಕಡ್ಡಾಯವಾಗಿ ಟೆಲಿ ಟ್ರಯಾಜ್
- ಕಡಿಮೆ ಪ್ರಕರಣಗಳಿದ್ದ ಸಂದರ್ಭದಲ್ಲಿ ಫಿಸಿಕಲ್ ಟ್ರಯಾಜಿಂಗ್ ಮಾಡಲಾಗುತ್ತಿತ್ತು. ಈಗ ರೋಗಲಕ್ಷಣಗಳಿರುವ ವ್ಯಕ್ತಿಗಳಿಗೆ ಮಾತ್ರ ಮತ್ತೊಮ್ಮೆ ಅವರ ಮನೆ ಬಾಗಿಲಿಗೆ ಹೋಗಿ ಸಂಚಾರಿ ಟ್ರಯಾಜ್ ಘಟಕಗಳ ಮೂಲಕ ಫಿಸಿಕಲ್ ಟ್ರಯಾಜ್
- ಪ್ರಕರಣಗಳ ಸಂಖ್ಯೆ(ಕೇಸ್ ಲೋಡ್) ಆಧಾರದ ಮೇಲೆ ಎಲ್ಲ ವಾರ್ಡ್‌ಗಳಲ್ಲಿ 1 ಅಥವಾ 2 ಸಂಚಾರಿ ಟ್ರಯಾಜ್ ಘಟಕಗಳಿವೆ. ಬಿಬಿಎಂಪಿಯಲ್ಲಿ ಒಟ್ಟು 198 ವಾರ್ಡ್ ಗಳಿವೆ
- ಹೈ ರಿಸ್ಕ್ ಎಂದು ಗುರುತಿಸಲ್ಪಟ್ಟ ಪ್ರಕರಣಗಳಲ್ಲಿ ಹಾಗೂ 60 ವರ್ಷ ಮೇಲ್ಪಟ್ಟವರು ಮತ್ತು ಅನ್ಯಾರೋಗಗಳಿರುವವರಿಗೂ ಫಿಸಿಕಲ್ ಟ್ರಯಾಜ್
- ವೈದ್ಯಕೀಯ ಚೆಕ್ ಅಪ್ ಬಯಸುವ ರೋಗಿಗಳಿಗಾಗಿ ಎಲ್ಲ ಆರೋಗ್ಯ ವೈದ್ಯಾಧಿಕಾರಿ ವ್ಯಾಪ್ತಿಗಳಲ್ಲಿ ವಾಕ್-ಇನ್ ಸೌಲಭ್ಯದೊಂದಿಗೆ ಫಿಸಿಕಲ್ ಟ್ರಯಾಜ್ ಕೇಂದ್ರಗಳ ಸ್ಥಾಪನೆ
3. ಆಸ್ಪತ್ರೆಗೆ ದಾಖಲು ಮತ್ತು ಹಾಸಿಗೆ ಹಂಚಿಕೆ:
- ಬಿಬಿಎಂಪಿ ನೇರವಾಗಿ ಆಸ್ಪತ್ರೆ ಮತ್ತು ಹಾಸಿಗೆ ನಿರ್ವಹಣೆ ಮಾಡುವುದಿಲ್ಲ. ಆದರೂ ಸಾಂಕ್ರಾಮಿಕದ ಕಾಲದಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ನಿರ್ದಿಷ್ಟ ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳನ್ನು ಪಡೆದುಕೊಂಡು ಸಿ.ಹೆಚ್.ಬಿ.ಎಂ.ಎಸ್ ವ್ಯವಸ್ಥೆ ಮೂಲಕ ಬಿಬಿಎಂಪಿಗೆ ಹಂಚಿಕೆ ಮಾಡಿದೆ
- ಈ ಹಂಚಿಕೆಯಾದ ಹಾಸಿಗೆಗಳ ಖರ್ಚನ್ನು ರಾಜ್ಯ ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಭರಿಸುತ್ತದೆ
- ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ನಿರ್ವಹಣೆಗಾಗಿ ಮೀಸಲಿಟ್ಟ ಎಲ್ಲಾ ಹಾಸಿಗೆಗಳನ್ನು ಸಿ.ಹೆಚ್.ಬಿ.ಎಂ.ಎಸ್ ಮೂಲಕ ಹಂಚಿಕೆಗಾಗಿ ಪಡೆಯಲಾಗಿದೆ
- ಖಾಸಗಿ ಆಸ್ಪತ್ರೆಗಳು ಕೇವಲ ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳನ್ನು ಸಿ.ಹೆಚ್.ಬಿ.ಎಂ.ಎಸ್ ಅಡಿಯಲ್ಲಿ ಹಂಚಿಕೆ ಮಾಡುತ್ತವೆ. ಉಳಿದ ಆಸ್ಪತ್ರೆ ಹಾಸಿಗೆಗಳನ್ನು ಸರ್ಕಾರ, ಬಿಬಿಎಂಪಿ ಮತ್ತು ಸಿ.ಹೆಚ್.ಬಿ.ಎಂ.ಎಸ್ ನ ಯಾವುದೇ ಶಿಫಾರಸು ಇಲ್ಲದೆ ನೇರವಾಗಿ ಕಾಯ್ದಿರುಸುತ್ತವೆ
- ಇದುವರೆಗೆ ಒಟ್ಟು 28,067 ಹಾಸಿಗೆಗಳನ್ನು ಗುರುತಿಸಲಾಗಿದೆ(ಸರ್ಕಾರಿ ಆಸ್ಪತ್ರೆಗಳ 3,237 ಹಾಸಿಗೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ 2,696 ಹಾಸಿಗೆಗಳು, ಖಾಸಗಿ ಆಸ್ಪತ್ರೆಗಳ 13,540 ಹಾಸಿಗೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ 8,594 ಹಾಸಿಗೆಗಳು)
- ಇವುಗಳಲ್ಲಿ ಇದುವರೆಗೆ 6,255 ಹಾಸಿಗೆಗಳನ್ನು ಸಿ.ಹೆಚ್.ಬಿ.ಎಂ.ಎಸ್ ಮೂಲಕ ಹಂಚಿಕೆಯಾಗುವಂತೆ ಮಾಡಲಾಗಿದೆ. 362 ಹಾಸಿಗೆಗಳನ್ನು ಸಿ.ಹೆಚ್.ಬಿ.ಎಂ.ಎಸ್(ಸರ್ಕಾರಿ ಕೋಟಾ) ಮೂಲಕ ಹಂಚಿಕೆ ಮಾಡಲಾಗಿದೆ
- ಬೆಡ್ ಬುಕಿಂಗ್ ಅನ್ನು ವಿಕೇಂದ್ರೀಕರಣ ಮಾಡಲಾಗಿದೆ ಮತ್ತು ಎಲ್ಲ ಆರೋಗ್ಯ ವೈದ್ಯಾಧಿಕಾರಿ ವ್ಯಾಪ್ತಿಯಗಳಲ್ಲಿ 27 ವೈದ್ಯರುಗಳಿಗೆ ಲಾಗಿನ್ ಒದಗಿಸಲಾಗಿದೆ
4. ಹೋಂ ಐಸೋಲೇಷನ್ ಮತ್ತು ಕೋವಿಡ್ ಆರೈಕೆ ಕೇಂದ್ರಗಳು:
- ಕೋವಿಡ್ ಸೋಂಕಿತ ಶೇ. 90ರಷ್ಟು ಜನರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವುದಿಲ್ಲ
- ಬಹುತೇಕ ಪಾಸಿಟಿವ್ ಪ್ರಕರಣಗಳನ್ನು ಮನೆಯಲ್ಲಿಯೇ ಹೋಂ ಐಸೋಲೇಷನ್ ಮೂಲಕ ಗುಣಪಡಿಸಬಹುದು
- ಹೋಂ ಐಸೋಲೇಷನ್ ನಲ್ಲಿನ ಪಾಸಿಟಿವ್ ಇರುವ ವ್ಯಕ್ತಿಗಳನ್ನು ಟೆಲಿ ಕಾಲಿಂಗ್ ಮೂಲಕ ಮತ್ತು ವಾರ್ಡ್ ಮಟ್ಟದಲ್ಲಿ ಬಿಬಿಎಂಪಿ ಆರೋಗ್ಯ ತಂಡಗಳಿಂದ ಕ್ಷೇತ್ರ ಭೇಟಿ ಮೂಲಕ ಮಾನಿಟರ್ ಮಾಡಲಾಗುತ್ತದೆ
- ಹೋಂ ಐಸೋಲೇಷನ್ ನಲ್ಲಿರುವವರಿಗೆ ಅಗತ್ಯವಿದ್ದಲ್ಲಿ ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಔಷಧ ಮತ್ತು ಹೋಂ ಐಸೋಲೇಷನ್ ಕಿಟ್ ಗಳನ್ನು ಒದಗಿಸಲಾಗುವುದು
- ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಹೋಂ ಐಸೋಲೇಷನ್ ಅವಧಿಯು 7 ದಿನಗಳದ್ದಾಗಿರುತ್ತದೆ, 7 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಕಡ್ಡಾಯ. ಆ ಬಳಿಕ ಸೋಂಕಿತರು ನಿತ್ಯದ ಚಟುವಟಿಕೆಗಳನ್ನು ಪುನರಾರಂಭಿಸಬಹುದಾಗಿದೆ
- ಹೋಂ ಐಸೋಲೇಷನ್ ನಲ್ಲಿ ಇರಲಾಗದವರಿಗಾಗಿ ಬಿಬಿಎಂಪಿಯಿಂದ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅಂತಹ 27 ಕೋವಿಡ್ ಆರೈಕೆ ಕೇಂದ್ರಗಳು ಸ್ಥಾಪಿಸಲ್ಪಡುತ್ತಿದ್ದು, ಇದೇ ಜನವರಿ 14 ರೊಳಗೆ ಕಾರ್ಯಾರಂಭ ಮಾಡಲಿವೆ
- ಕೋವಿಡ್ ಆರೈಕೆ ಕೇಂದ್ರಗಳಿಗೆ ಹಾಸಿಗೆ ಹಂಚಿಕೆಯು ಸಿ.ಹೆಚ್.ಬಿ.ಎಂ.ಎಸ್ ಮೂಲಕ ಆಗುತ್ತಿದೆ. 27 ಆರೋಗ್ಯ ವೈದ್ಯಾಧಿಕಾರಿ ವ್ಯಾಪ್ತಿಗಳಿಗೆ ಸಿ.ಹೆಚ್.ಬಿ.ಎಂ.ಎಸ್ ಆಕ್ಸಸ್ ನೀಡಲಾಗಿದೆ.
5. ಸಹಾಯವಾಣಿಗಳು:
- ಟೋಲ್ ಫ್ರೀ ಸಂಖ್ಯೆ 1533 ಅನ್ನು 24/7 ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.(ಈ ಹಿಂದೆ ಕೋವಿಡ್‌ಗಾಗಿ ಬಳಸಲಾಗುತ್ತಿದ್ದ ಸಹಾಯವಾಣಿ ಸಂಖ್ಯೆ 1912 ಅನ್ನು ನಿಲ್ಲಿಸಲಾಗಿದೆ, ಆದರೆ ಅದೇ ಸಿಬ್ಬಂದಿಯೇ 1533 ರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ)
- ಕೇಂದ್ರ ಸಹಾಯವಾಣಿಯ ಜೊತೆಗೆ, 8 ವಲಯ ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಲಾಗಿದ್ದು, 24/7 ಕಾರ್ಯನಿರ್ವಹಿಸುತ್ತದೆ
- ವಿಧಾನಸಭಾ ಕ್ಷೇತ್ರ ಮಟ್ಟ/ಆರೋಗ್ಯ ವೈದ್ಯಾಧಿಕಾರಿ ಶ್ರೇಣಿಯ ನಿಯಂತ್ರಣ ಕೊಠಡಿಯ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ
6. ಮಾಹಿತಿ, ಶಿಕ್ಷಣ ಮತ್ತು ಸಂವಹನ:
- ನಗರದ ಕೋವಿಡ್ ಸ್ಥಿತಿಗತಿ ಕುರಿತ ದೈನಂದಿನ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಪ್ರಕಟಣೆ ಮೂಲಕ ಪ್ರಕಟಿಸಲಾಗುತ್ತಿದೆ
- ಚಲಿತದಲ್ಲಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸೆಲ್ಫ್ ಐಸೋಲೇಷನ್, ಚಿಕಿತ್ಸೆ, ಕೋವಿಡ್ ಸಮುಚಿತ ನಡವಳಿಕೆ ಕುರಿತ ತಿಳಿವಳಿಕೆ ವಿಚಾರಗಳನ್ನು ದೈನಂದಿನ ಆಧಾರದಲ್ಲಿ ಎಲ್ಲ ಗುಂಪುಗಳಿಗೆ ಹಂಚಲಾಗುತ್ತಿದೆ
- ಸಮುದಾಯಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಶಾಲೆಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಮಾಲ್ ಗಳೊಂದಿಗೆ ಮಾಧ್ಯಮ ಮತ್ತು ವರ್ಚುವಲ್ ಸಭೆಗಳ ಮೂಲಕ ಆಗಾಗ್ಗೆ ಸಂವಹನಗಳು ನಡೆಯುತ್ತಿವೆ
- ಅಭಿಪ್ರಾಯ ಮತ್ತು ಸಲಹೆಗಳಿಗಾಗಿ ತಜ್ಞರ ಸಮಿತಿಗಳೊಂದಿಗೆ ಮಾತುಕತೆ ನಡೆಸಲಾಗಿದೆ
- ಕೋವಿಡ್ ಸಂಬಂಧಿತ ಇತ್ತೀಚಿನ ಎಲ್ಲ ಮಾಹಿತಿಯನ್ನು ಬಿಬಿಎಂಪಿಯ ಕೋವಿಡ್ ವೆಬ್ ಸೈಟ್ https://apps.bbmpgov.in/covid19/ ಮೂಲಕ ಪಡೆಯಬಹುದಾಗಿದೆ
7. ನಿರ್ಬಂಧಗಳು:
- ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮತ್ತು ಇತರೆ ನಿರ್ಬಂಧಗಳು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮುಂದುವರಿಯುತ್ತದೆ
- ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಗಳನ್ನು ಪ್ರಮುಖ ಪ್ರದೇಶಗಳಿಂದ ಸ್ಥಳಾಂತರಿಸಬೇಕು ಮತ್ತು ಹೆಚ್ಚು ಅಂತರದೊಂದಿಗೆ ತೆರೆದ ಪ್ರದೇಶಗಳಲ್ಲಿ ಇರಿಸಬೇಕು. ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಆದಷ್ಟು ಬೇಗ ಹೊರಡಿಸಬೇಕು
- ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ಅಪಾರ್ಟ್ಮೆಂಟ್‌ಗಳಿಗೆ ಪರಿಷ್ಕೃತ ಸಲಹೆಗಳನ್ನು ಜಾರಿಗೆ ತರಲಾಗಿದ್ದು, ಅದನ್ನು ತ್ವರಿತವಾಗಿ ಹೊರಡಿಸಲಾಗುವುದು
- ಪೇಯಿಂಗ್ ಗೆಸ್ಟ್ ಗಳು, ಹಾಸ್ಟೆಲ್‌ಗಳು ಇತ್ಯಾದಿಗಳಲ್ಲಿ ಹಲವು ಕೋವಿಡ್ ಪ್ರಕರಣಗಳನ್ನು ಗುರುತಿಸಿರುವುದರಿಂದ, ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ ಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತದೆ
- ಕೋವಿಡ್ ಸಮುಚಿತ ವರ್ತನೆ ಜಾರಿಗೊಳಿಸಲು ಮತ್ತು ಕಣ್ಗಾವಲು ಸಹಾಯಕ್ಕಾಗಿ 580 ಮಾರ್ಷಲ್‌ಗಳು ಮತ್ತು 1217 ಹೋಮ್ ಗಾರ್ಡ್ ಗಳನ್ನು ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 21 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಪತ್ತೆ: ಪಾಸಿಟಿವಿಟಿ ದರ ಶೇ 10.96