ಮಂಗಳೂರು: ಸಂಘಟಿತ ನಾಯಕತ್ವದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯನ್ನು ಎದುರಿಸಲಿದೆ. ಮುಖ್ಯಮಂತ್ರಿ ಆಯ್ಕೆ ಮಾಡುವುದು ಪಕ್ಷದ ದೊಡ್ಡವರ ವಿಚಾರ. ಅದರಲ್ಲಿ ಯುವ ಕಾಂಗ್ರೆಸ್ ತಲೆ ಹಾಕುವುದಿಲ್ಲ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ ಅವರು ಮುಂದಿನ ಸಿಎಂ ಎಂದು ಎಲ್ಲೂ ಹೇಳಿಲ್ಲ. ಅವರಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಮುಸ್ಲಿಮರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಸುಳ್ಳು. ನಾನೂ ಮುಸ್ಲಿಂ ಸಮಾಜದವನು. ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಡಿ.ಕೆ.ಶಿವಕುಮಾರ್ ಅವರು. ಮುಂದಿನ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಅತಿ ಹೆಚ್ಚು ಸೀಟು ಸಿಗಲಿದೆ. ಕೆಪಿಸಿಸಿ ಅಧ್ಯಕ್ಷರು, ಹಿರಿಯ ನಾಯಕ ಹರಿಪ್ರಸಾದ್ ಅವರು ಯುವ ಕಾಂಗ್ರೆಸ್ ಹಿನ್ನೆಲೆಯಿಂದಲೇ ಬಂದವರು. ಯುವಕರಿಗೆ ಹೆಚ್ಚಿನ ಅದ್ಯತೆ ನೀಡುವ ನಂಬಿಕೆ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಯಾರೂ ಬೇಕಾದರೂ ಸಿಎಂ ಆಗಲಿ ಎಂದು ಹೇಳಿದರು.
ಚಿಕ್ಕಮಗಳೂರು ಯುವ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೊಡೆದಾಟದ ಬಗ್ಗೆ ಈಗಾಗಲೇ ವರದಿ ಕೇಳಿದ್ದೇನೆ. ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ. ಯುವಕರ ನಡುವೆ ಭಿನ್ನಾಭಿಪ್ರಾಯ ಆಗಿದೆ. ಹಾಗಾಗಿ ಸ್ವಲ್ಪ ವಾಗ್ವಾದ ನಡೆದಿದೆ ಎಂದು ಸಮಜಾಯಿಷಿ ಕೊಟ್ಟರು.
ಇದನ್ನೂ ಓದಿ: ಕಾರ್ಯಕರ್ತರಿಗೆ ಬಿಜೆಪಿ ಬಂಪರ್ ಕೊಡುಗೆ: ನಿಗಮ ಮಂಡಳಿಗಳಿಗೆ 24ಕ್ಕೂ ಹೆಚ್ಚು ಹೊಸ ಸಾರಥಿಗಳ ನೇಮಕ