ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯಬೇಕಾದರೆ ಜಿಲ್ಲೆಗಳ ಆಯಾ ವ್ಯಾಪ್ತಿಯ ಪಾಲಿಕೆ ಆಯುಕ್ತರು, ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯ. ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ಕೋವಿಡ್ ದರ ನಿಗದಿಪಡಿಸಿ ಆದೇಶ ಹೊರಡಿಸಿತು. ಆದೇಶ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿತ್ತು.
ದರ ನಿಗದಿಪಡಿಸಿದರೂ, ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ಬಿಲ್ ಹಾಕುವುದನ್ನು ಹವ್ಯಾಸ ಮಾಡಿಕೊಂಡಿವೆ ಎಂದೆನಿಸುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಆರ್ಪಿಸಿ ಲೇಔಟ್ನ ನಿವಾಸಿ ನಾಗರಾಜ್ ಎಂಬವರಿಗೆ ಜುಲೈ 19ರಂದು ಸಣ್ಣ ಜ್ವರ ಕಾಣಿಸಿಕೊಂಡಿತ್ತು. ಅವರೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಈ ವೇಳೆ ಖಾಸಗಿ ಆಸ್ಪತ್ರೆಯೊಂದು ಯಾವುದೇ ಮಾಹಿತಿ ನೀಡದೇ ಐಸಿಯು ವೆಂಟಿಲೇಟರ್ನಲ್ಲಿ ಇರುವುದಾಗಿ ತಿಳಿಸಿದೆ.
ದಿನಕ್ಕೊಂದು ಕಾರಣ ಹೇಳಿ ಕಡೆಗೆ ಆಗಸ್ಟ್ 7ರಂದು ₹9 ಲಕ್ಷ ಬಿಲ್ ಮಾಡಿ ಬಳಿಕ ಮೃತರಾಗಿದ್ದಾರೆ. ಮೃತ ದೇಹ ಬೇಕೆಂದರೆ ಅಷ್ಟೂ ಹಣ ಕಟ್ಟಿ ಎಂದು ಕುಟುಂಬ ಸದಸ್ಯರಿಗೆ ಹೇಳಿದ್ದಾರೆ. ಕೊನೆಗೆ ಸಚಿವ ಸುಧಾಕರ್ ಹಾಗೂ ರಾಮುಲು ಮಧ್ಯಪ್ರವೇಶದ ಬಳಿಕ ಮೃತದೇಹ ಹಸ್ತಾಂತರ ಮಾಡಲಾಯಿತು. ಇಂತಹ ಹಲವು ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ. ಆದರೆ, ಯಾರೂ ಈವರೆಗೆ ಮೃತ ದೇಹ ಕೊಡದ ಸಂಬಂಧವಾಗಲಿ, ಹೆಚ್ಚುವರಿ ಹಣ ಪಡೆಯುವ ಬಗ್ಗೆಯಾಗಲಿ ಲಿಖಿತ ದೂರು ನೀಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರ ನಿಗದಿಪಡಿಸಿದ ಖಾಸಗಿ ದರ
- ಜನರಲ್ ವಾರ್ಡ್- ₹ 10,000
- ಹೆಚ್ ಡಿಯು - ₹ 12,000
- ಐಸಿಯು - ₹ 15,000
- ಐಸಿಯು ವಿತ್ ವೆಂಟಿಲೇಟರ್- ₹ 25,000
ಐಎಎಸ್-ಐಪಿಎಸ್ ಅಧಿಕಾರಿಗಳ ಕಣ್ಗಾವಲು: ಕೊರೊನಾ ಸೋಂಕಿತರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವುದು ಹಾಗೂ ಹಾಸಿಗೆ ಇದ್ದರೂ ಇಲ್ಲ ಎಂದು ಹೇಳಿ ಕಳುಹಿಸಿದ್ದ ಕಾರಣ ಸರ್ಕಾರವೂ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡವನ್ನು ರಚಿಸಿತು. ಇದರಲ್ಲಿ ಹೆಚ್ಚು ಸದ್ದು ಮಾಡಿದ್ದು ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ಹರ್ಷಾ ಗುಪ್ತಾ ಅವರ ತಂಡ. ಸರ್ಕಾರ ಮೂರು ಆಸ್ಪತ್ರೆಗಳ ಜವಾಬ್ದಾರಿಯನ್ನು ನೀಡಿತ್ತು. ಈ ಪೈಕಿ ತಪಾಸಣೆ ವೇಳೆ ಹೆಚ್ಚುವರಿ ಬಿಲ್ ಹಾಕಿ ಹಣ ಪಡೆದಿದ್ದ ಖಾಸಗಿ ಆಸ್ಪತ್ರೆಯವರಿಗೆ ತಿಳಿ ಹೇಳಿ, 24 ಜನರಿಗೆ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದರಲ್ಲಿ ಮುಂಗಡವಾಗಿ ಒಬ್ಬೊಬ್ಬರಿಂದ 5-6 ಲಕ್ಷ ಪಡೆದಿದ್ದರು.
ಸುಲಿಗೆ ಚಾಳಿ ಮುಂದುವರೆಸಿದರೆ ಕಠಿಣ ಕ್ರಮ: ಸುಲಿಗೆ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಯಾವುದೇ ದೂರು ಬಂದರೂ ತಕ್ಷಣ ಕ್ರಮವಹಿಸಿಲು ಆಯಾ ಜಂಟಿ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ದೂರು ಬಂದಾಗ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಬಿಟ್ಟಿಲ್ಲ. ಹೀಗಾಗಿ, ಆಸ್ಪತ್ರೆಗಳು ಇಂತಹ ಚಾಳಿಯನ್ನು ಮುಂದುವರೆಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತ ಎಂದು ಎಚ್ಚರಿಸಿದರು.