ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರದಿಂದಾಗಿ ಸರ್ಕಾರ ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಇದರ ಪರಿಣಾಮ ರೈತರ ಮೇಲೆ ಬಿದ್ದಿದೆ. ಬೆಳೆದ ತರಕಾರಿ, ಹೂವು - ಹಣ್ಣು ಮಾರಾಟ ಮಾಡಲಾಗದ ಸ್ಥಿತಿಗೆ ಬಂದಿರುವ ರೈತರು, ಬೆಳೆದ ಬೆಳೆಗಳನ್ನು ಬೀದಿಗೆ ಚೆಲ್ಲುತ್ತಿರುವುದು, ಹೊಲದಲ್ಲೇ ಬಿಡುವುದು ಸಾಮಾನ್ಯವಾಗಿದೆ. ಒಟ್ಟಾರೆ, ಕೊರೊನಾ ಅಬ್ಬರದಿಂದಾಗಿ ರೈತರ ಬದುಕು ಬೀದಿಗೆ ಬಿದ್ದಿದೆ.
ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೇ ಕಷ್ಟ ಪಟ್ಟು ಬೆಳೆದ ತರಕಾರಿ, ಹೂ-ಹಣ್ಣುಗಳಿಗೆ ಬೆಲೆ ಇಲ್ಲದೆ ಜಮೀನುಗಳಲ್ಲೇ ನಾಶವಾಗುತ್ತಿದ್ದರೆ, ನಗರದಲ್ಲಿ ಮಾತ್ರ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಸಿಗದ ಬೆಲೆ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುತ್ತಿದೆ. ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂದು ಕೆಲವು ರೈತರು ತರಕಾರಿಗಳನ್ನು ರಸ್ತೆ ಬದಿ ಸುರಿಯುತ್ತಿದ್ದಾರೆ. ಕೆಲ ರೈತರು ಬೆಳೆ ಕಟಾವು ಮಾಡದೆ ಹಾಗೇ ಜಮೀನಿನಲ್ಲಿ ಬಿಟ್ಟಿದ್ದು, ಇನ್ನೂ ಕೆಲವರು ಉಚಿತವಾಗಿ ಹಂಚುತ್ತಿದ್ದಾರೆ.
ಓದಿ: ಯುವತಿ ವಿಚಾರದಲ್ಲಿ ಗಲಾಟೆ ; ಹಲ್ಲೆಗೊಳಗಾಗಿ ಯುವಕ ಸಾವು : ಹಾಸನದಲ್ಲಿ ಪ್ರಕರಣ ದಾಖಲು..
ಲಾಕ್ಡೌನ್ ಇರುವುದರಿಂದ ಎಷ್ಟೇ ಬೆಲೆ ಹೇಳಿದರೂ ಗ್ರಾಹಕರು ಖರೀದಿಸುತ್ತಾರೆ. ಏಕೆಂದರೆ, ನಾಲ್ಕು ಗಂಟೆ ಸಮಯದಲ್ಲಿ ವ್ಯಾಪಾರ ಮಾಡಿಕೊಳ್ಳಬೇಕೆಂದು ಚಿಲ್ಲರೆ ವ್ಯಾಪಾರಿಗಳು ಅಧಿಕ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ವಾಹನ ಸೌಲಭ್ಯವಿಲ್ಲ, ತಂದರೂ ಬೆಲೆ ಇಲ್ಲ ಖರ್ಚು ಸಹ ಬರುವುದಿಲ್ಲ. ಹಾಗಾಗಿ ರೈತರು ಜಮೀನುಗಳಲ್ಲೆ ಫಸಲನ್ನು ಬಿಡುತ್ತಿದ್ದಾರೆ.
ಅದೂ ಅಲ್ಲದೇ ಬೆಳಗ್ಗೆ ಅಷ್ಟೆ ಮಾರುಕಟ್ಟೆ ಇರುವುದು, ಸಂಜೆ ಮಾರುಕಟ್ಟೆಗಳು ಇಲ್ಲದೆ ಇರುವುದರಿಂದ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ಇದರ ಲಾಭ ಮಾತ್ರ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೇಬು ತುಂಬುತ್ತಿದೆ. ರೈತರ ಸಂಕಷ್ಟ ಅರಿತ ಕೆಲ ಸಿನಿಮಾ ನಟರು, ಜನಪ್ರತಿನಿಧಿಗಳು, ಧಾನಿಗಳು ರೈತರಿಂದ ಕೆಲ ಫಸಲನ್ನು ಖರೀದಿಸಿ ಸಂಕಷ್ಟಕ್ಕೆ ಸಿಲುಕಿದವರಿಗೆ ಹಂಚುತ್ತಿದ್ದಾರೆ.
ಹೊರ ರಾಜ್ಯಗಳಿಗೆ ತರಕಾರಿ ಹಾಗೂ ಹೂ - ಹಣ್ಣು ಸರಬರಾಜು ಇಲ್ಲದೆ ಬೆಲೆ ಕುಸಿತವಾಗಿದೆ. ಅಲ್ಲದೆ ಹೋಲ್ ಸೆಲ್ ಕೊಳ್ಳುವವರಿಲ್ಲ, ಚಿಲ್ಲರೆಯವರು ಮಾತ್ರ ಖರೀದಿಸುತ್ತಾರೆ ಹಾಗಾಗಿ ಚಿಲ್ಲರೆ ತರಕಾರಿ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ತರಕಾರಿ ಖರೀದಿಸುವವರಿಗಿಂತ ಮಾರುವವರೇ ಹೆಚ್ಚಾಗಿದ್ದಾರೆ. ಹೋಬಳಿ, ಜಿಲ್ಲಾ, ತಾಲೂಕು ಮಟ್ಟದಲ್ಲಿ ತರಕಾರಿ ಮಾರುಕಟ್ಟೆಗಳನ್ನು ತೆರೆದು ರೈತರಿಂದ ನೆರವಾಗಿ ಖರಿದಿಸಿದರೆ ಸ್ವಲ್ಪ ಅನುಕೂಲ ವಾಗಲಿದೆ. ಇಲ್ಲವಾದರೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕುವಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೆಕಿದೆ ಎನ್ನುತ್ತಾರೆ ರೈತರು.
ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಬಂದಾಗ, ಲಾಕ್ಡೌನ್ ಸಮಯದಲ್ಲಿ ಭಾರಿ ನಷ್ಟವಾಗಿ ರಾಜ್ಯದ ತರಕಾರಿ ಬೆಳೆಗಾರರು, ಹಣ್ಣು - ಹಂಪಲು, ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೊನಾ ಎರಡನೇ ತಾಂಡವವಾಡುತ್ತಿದ್ದು, ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದುವೆ ಸಮಾರಂಭಗಳಲ್ಲಿ ಸೀಮಿತ ಪ್ರಮಾಣದಲ್ಲಿ ಅತಿಥಿಗಳನ್ನು ಸೇರಿಸುವುದು, ಸಾಮಾಜಿಕವಾಗಿ ಜನರು ಗುಂಪು ಸೇರದಂತೆ ತಡೆಗಟ್ಟಿರುವುದು, ಜಾತ್ರೆಗಳು, ಹಬ್ಬ-ಹರಿದಿನಗಳನ್ನು ಸಾರ್ವಜನಿಕವಾಗಿ ಆಚರಿಸಲು ಕತ್ತರಿ ಹಾಕಿರುವುದು ರೈತರ ಬೆಳೆಗಳ ಮಾರಾಟಕ್ಕೆ ಕುತ್ತು ತಂದಿದೆ. ಹಣ್ಣು-ತರಕಾರಿಗಳನ್ನು ಮಾರುಕಟ್ಟೆಗೆ ಒಯ್ಯಲು ಪಕ್ಕದ ರಾಜ್ಯಗಳಿಗೆ ಸಾಗಾಟ ಮಾಡಲು ವಾಹನಗಳ ಓಡಾಟ ಕೂಡ ಕಡಿಮೆಯಾಗಿರುವುದು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯ ಅಭಾವವನ್ನು ಸೃಷ್ಟಿಸಿದೆ.
ತರಕಾರಿ ಕೇಳುವವರೇ ಇಲ್ಲ
ಕನಿಷ್ಠ ಕೆಜಿಗೆ 20 ರೂ.ಗೆ ರೈತರಿಂದ ಮಾರಾಟವಾಗುತ್ತಿದ್ದ ತರಕಾರಿಗಳು, ಈಗ 10 ರೂಪಾಯಿಗೆ ಇಳಿದಿದೆ. ಟೊಮೇಟೊ, ಕಲ್ಲಂಗಡಿ ಹಣ್ಣು, ಬೀನ್ಸ್, ಕ್ಯಾಬೇಜ್, ಬೆಂಡೆಕಾಯಿ, ಸೌತೆಕಾಯಿ, ಬಾಳೆ ಮೊದಲಾದ ಬೆಳೆಗೆ ಸಾಕಷ್ಟು ಅಸಲು ಹಾಕಿ ಬೆಳೆದವರು ಈ ವರ್ಷ ಉತ್ತಮ ಬೆಲೆ ಸಿಗಬಹುದೆಂದು ನಿರೀಕ್ಷಿಸಿದ್ದರು. ಆದರೆ, ಇಂದು ಕೈಗೆ ಸಿಕ್ಕಿದ ಬೆಲೆಗೆ ರೈತರು ಹಣ್ಣು - ತರಕಾರಿ, ಹೂವುಗಳನ್ನು ಮಾರಬೇಕಾದ ಪರಿಸ್ಥಿತಿ ಬಂದಿದೆ.
ಕಳೆದ ಕೆಲವು ತಿಂಗಳಿನಿಂದ ಕೆಜಿಗೆ ಸರಾಸರಿ 15 ರೂ.ಗೆ ಮಾರಾಟ ಮಾಡುತ್ತಿದ್ದ ಟೊಮೇಟೊವನ್ನು ರೈತರು ಈಗ ಮಾರುಕಟ್ಟೆಯಲ್ಲಿ ನಾಲ್ಕೈದು ರೂಪಾಯಿಗೆ ಮಾರುತ್ತಿದ್ದಾರೆ. ಅದರಲ್ಲಿ ಬೆಳೆದ ರೈತರಿಗೆ 2 ರೂಪಾಯಿ ಕೂಡ ಸಿಗುವುದಿಲ್ಲ. ಬೆಳೆಗೆ ಮತ್ತು ಕಾರ್ಮಿಕರ ಕೂಲಿ ಸಂಬಳ ಕೂಡ ಸಿಗುತ್ತಿಲ್ಲ ಎಂದು ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋಗದೇ ತಮ್ಮ ಜಮೀನಿನಲ್ಲಿಯೇ ನಾಶ ಮಾಡುತ್ತಿದ್ದಾರೆ.
ನಾನು ಎರಡು ಎಕರೆಯಲ್ಲಿ ಮೂರ್ನಾಲ್ಕು ಲಕ್ಷ ಖರ್ಚು ಮಾಡಿ ಟೊಮೇಟೊ ಬೆಳೆ ಬೆಳೆದಿದ್ದೇನೆ, ಈಗ ಅದನ್ನು ಕೇಳುವವರಿಲ್ಲ. ಲಾಕ್ಡೌನ್ ನಿಂದಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಸರಬರಾಜು ಇಲ್ಲದ ಕಾರಣ ವ್ಯಾಪಾರಿಗಳು ಖರೀದಿಸುತ್ತಿಲ್ಲ. ದಿಕ್ಕೇ ತೋಚದಂತಾಗಿದೆ ಎಂದು ಹೊಸಕೋಟೆ ತಾಲೂಕಿನ ರೈತ ಮಂಜುನಾಥ್ ತಮ್ಮ ಅಳಲನ್ನು ತೋಡಿಕೊಂಡರು.
ರೈತರ ವಿಶ್ವಾಸ ಕುಗ್ಗಿಸಿದ ಕೊರೊನಾ
ಇನ್ನೂ ಅದೇ ರೀತಿ ಒಂದು ಎಕರೆ ಭೂಮಿಯಲ್ಲಿ ಎಲೆಕೋಸು ಬೆಳೆದಿರುವ ಉಸ್ಮಾನ್ ಸಾಬ್, ಒಂದು ಎಕರೆಯಲ್ಲಿ ಗುಲಾಬಿ ಹೂ ಬೆಳೆದಿರುವ ನಾಗೇಶ್, ಈ ಕೊರೊನಾ ರೋಗ ಬಂದು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದರ ಜೊತೆಗೆ ಆರ್ಥಿಕವಾಗಿಯೂ ನೆಲ ಕಚ್ಚುವಂತೆ ಮಾಡಿದೆ. ಮಾರಾಟ ಮಾಡಲು ಸಾಧ್ಯವಾಗದೇ ತೋಟದಲ್ಲೇ ಬೆಳೆ ಕೊಳೆಯುತ್ತಿದೆ ಎಂದು ಹೇಳಿದ್ದಾರೆ. ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಬರಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸಹ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಣ್ಣ, ಮಧ್ಯಮ ಮತ್ತು ಅತಿಸಣ್ಣ ರೈತರ ಜೀವನೋಪಾಯದ ಮೇಲೆಯೂ ದೊಡ್ಡ ಪರಿಣಾಮ ಬೀರಿದೆ. ಹಾಗಾಗಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ತೋಟಗಾರಿಕಾ ಬೆಳೆಗಾರರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.