ಬೆಂಗಳೂರು: ಲಾಕ್‍ಡೌನ್ ಬಳಿಕ ಸರ್ಕಾರದ ಅನುಮತಿ ಮೇರೆಗೆ ಆರಂಭಗೊಂಡ ಬೀದಿಬದಿ ವ್ಯಾಪಾರ ನಿರೀಕ್ಷಿತ ಗ್ರಾಹಕರಿಲ್ಲದೇ ನೆಲಕಚ್ಚಿದೆ. ದಿನವಿಡೀ ಅಂಗಡಿ ತೆರೆದರೂ ಗ್ರಾಹಕರು ಖರೀದಿಗೆ ಬರುತ್ತಿಲ್ಲ ಎಂದು ವ್ಯಾಪಾರಿಗಳು ಅಳಲು ತೊಡಿಕೊಳ್ಳತ್ತಿದ್ದಾರೆ.
ಕೆ.ಆರ್.ಪುರ ಮತ್ತು ಮಹದೇವಪುರದ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಬಟ್ಟೆ, ಚಪ್ಪಲಿ, ಬ್ಯಾಗ್, ಗೊಂಬೆಗಳು, ಬೆಡ್ ಶೀಟ್, ಜವಳಿ, ಮಡಿಕೆ, ಹಣ್ಣು - ಹೂವು, ತರಕಾರಿಗಳ ಜೊತೆಗೆ ಗೃಹೋಪಯೋಗಿ ವಸ್ತುಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.
ಕೆ.ಆರ್.ಪುರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನಲ್ಲೇ ಅಂಗಡಿ ತೆರೆದು ವ್ಯಾಪಾರ ಮಾಡಿದರೂ ಜನ ಯಾರೂ ಸುಳಿಯುತ್ತಿಲ್ಲ. ಮೊದಲು ವಸ್ತುಗಳ ಬಗ್ಗೆ, ಬೆಲೆ ಬಗ್ಗೆ ವಿಚಾರಿಸುತ್ತಿದ್ದರು. ಈಗ ಅಂಗಡಿಗಳ ಬಳಿ ಬರುತ್ತಿಲ್ಲ. 15 ದಿನಗಳಿಂದ ಕಾಯುವುದೇ ಕೆಲಸವಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಹದಿನೈದು ವರ್ಷಗಳ ಕಾಲ ನಾನು ಗೊಂಬೆಗಳ ತಯಾರಿ ಮಾಡಿ ವ್ಯಾಪಾರ ಮಾಡುತ್ತಿದ್ದೆ. ಲಾಕ್‍ಡೌನ್ ಬಂದ ಮೇಲೆ ವ್ಯಾಪಾರ ತುಂಬಾ ಕಡಿಮೆಯಾಗಿದೆ. ಕಟ್ಟಡ ನಿರ್ಮಾಣ ಕೆಲಸ ನಿಂತು ಹೋಗಿದೆ. ಇದರಿಂದ ನಮ್ಮ ವ್ಯಾಪಾರಕ್ಕೆ ತುಂಬ ಪೆಟ್ಟು ಬಿದ್ದಿದೆ. ಅಮವಾಸ್ಯೆ ಬಂದರೆ ಮಾತ್ರ ಕೆಲವು ಗ್ರಾಹಕರು ಬರುತ್ತಾರೆ. ಮೊದಲು ಎರಡು ಅಥವಾ ಮೂರು ಸಾವಿರ ವ್ಯಾಪಾರ ಆಗುತ್ತಿತ್ತು. ಆದರೆ, ಈಗ ನೂರು ಇನ್ನೂರು ರೂಪಾಯಿ ಆಗೋದೆ ಕಷ್ಟ ಅಂತ ತಮ್ಮ ಗೊಂಬೆಗಳ ವ್ಯಾಪಾರಿಯೊಬ್ಬರು ಸಂಕಷ್ಟವನ್ನು ತೋಡಿಕೊಂಡರು.
ಜವಳಿ ಉತ್ಪನ್ನಗಳ ವ್ಯಾಪಾರಿಗಳು ಮಾತನಾಡಿ ವ್ಯಾಪಾರ ಮಾಡಿದರಷ್ಟೇ ಮೂರೂ ಹೊತ್ತಿನ ಊಟ. ಈಗಿನ ಪರಿಸ್ಥಿತಿಯಲ್ಲಿ ಅಂಗಡಿಗೆ ಒಬ್ಬರು ಗ್ರಾಹಕರು ಬಂದರೂ ಸಾಕು ಎನ್ನುವಂತಾಗಿದೆ. ಕೊರೊನಾ ಸೋಂಕು ಭೀತಿಯಿಂದ ಜನರು ಖರೀದಿಯಿಂದ ದೂರವೇ ಉಳಿದಿದ್ದಾರೆ. ವ್ಯಾಪಾರವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಜೊತೆಗೆ ಲಾಕ್‍ಡೌನ್‍ನಿಂದ ಎರಡು ತಿಂಗಳವರೆಗೆ ವ್ಯಾಪಾರ ನಿಂತು ಹೋಗಿತ್ತು. ಸಾಲ ಮಾಡಿ ಸಂಸಾರ ಸಾಗಿಸುವ ಪರಿಸ್ಥಿತಿ ಇದೆ. ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಿದೆ ಎಂದು ಅಳಲು ತೋಡಿಕೊಂಡರು.
ಬೀದಿಬದಿ ಆಹಾರ ಮಾರಾಟ ಮಳಿಗೆಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶ ನೀಡಲಾಗಿದ್ದು, ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಆಹಾರ ಕೊಂಡೊಯ್ಯಲು ಬರುತ್ತಾರೆ. ಇದರ ಜೊತೆಗೆ ಆರೋಗ್ಯಾಧಿಕಾರಿಗಳು ಬೀದಿಬದಿ ವ್ಯಾಪಾರಕ್ಕೆ ಕೆಲವೆಡೆ ಅವಕಾಶ ನೀಡುತ್ತಿಲ್ಲ ಎಂದು ಕೆಲವರು ದೂರಿದ್ದಾರೆ. ಇದರ ಜೊತೆಗೆ ಹೂಡಿ, ಮಾರತಹಳ್ಳಿ ರಾಮಮೂರ್ತಿನಗರ, ಟಿನ್ ಫ್ಯಾಕ್ಟರಿ, ವೈಟ್‍ಫೀಲ್ಡ್ ಸೇರಿ ಹಲವೆಡೆ ವ್ಯಾಪಾರಕ್ಕೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.