ಬೆಂಗಳೂರು: ಖಾಸಗಿ ಅನುದಾನ ರಹಿತ ಶಾಲೆಗಳು 2020-21ರ ಸಾಲಿನ 1ರಿಂದ 9ನೇ ತರಗತಿಯ ಮಕ್ಕಳ ಫಲಿತಾಂಶವನ್ನು ಸ್ಯಾಟ್ಸ್ (ಸ್ಟುಡೆಂಟ್ ಅಚೀವ್ಮೆಂಟ್ ಟ್ರಾಕ್ ಸಿಸ್ಟಮ್) ನಲ್ಲಿ ದಾಖಲಿಸಿ ಉತ್ತೀರ್ಣ ಮಾಡಬೇಕೆನ್ನುವ ಆದೇಶ ಗೊಂದಲವನ್ನುಂಟು ಮಾಡಿದೆ ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಚಿವ ಸುರೇಶ್ ಕುಮಾರ್‌ಗೆ ಪತ್ರ ಬರೆದಿದ್ದಾರೆ.
ಮೇ 24 ರವರೆಗೆ ಶಾಲೆಗಳು ಕೋವಿಡ್ ಕಾರಣದಿಂದ ಬಂದ್ ಆಗಿದ್ದು, ತಕ್ಷಣವೇ SATS ನಲ್ಲಿ ಫಲಿತಾಂಶವನ್ನು ಪ್ರಕಟಿಸಲು ಹೇಗೆ ಸಾಧ್ಯ? ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಭೌತಿಕವಾಗಿ ಬಂದಿಲ್ಲ, ಆನ್ಲೈನ್ನಲ್ಲಿಯೂ ಭಾಗಿಯಾಗಿಲ್ಲ. ಮಕ್ಕಳನ್ನು ಮೌಲ್ಯಮಾಪನಕ್ಕೆ ಹೇಗೆ ಒಳಪಡಿಸುವುದು? ಶೇಕಡಾ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆದಿಲ್ಲ, ಅವರ ದಾಖಲಾತಿ ಹೇಗೆ ? ಈ ಪ್ರಶ್ನೆಗಳಿಗೆ ಯಾವುದೇ ಮಾರ್ಗದರ್ಶನ ನೀಡದೆ ಶೈಕ್ಷಣಿಕ ರೀತಿ-ನೀತಿಗಳನ್ನು ಗಾಳಿಗೆ ತೂರಿ, ಕಾನೂನು ಬಾಹಿರವಾಗಿ ಎಲ್ಲಾ ಮಕ್ಕಳ ಫಲಿತಾಂಶವನ್ನು ಸ್ಯಾಟ್ಸ್ನಲ್ಲಿ ಹಾಕಬೇಕೆನ್ನುವುದು ಸರಿಯೇ? ಎಂದು ಲೋಕೇಶ್ ಪ್ರಶ್ನಿಸಿದ್ದಾರೆ.
27 -1-2021 ರಂದು ತಮ್ಮ ಇಲಾಖೆಯಿಂದ ಶೇ 70 ರಷ್ಟು ಶಾಲಾ ಶುಲ್ಕವನ್ನು ಪಡೆಯಬೇಕೆಂದು ಆದೇಶ ನೀಡಿದ್ದೀರಿ. ಆದರೆ, ಶೇಕಡ 80 ರಷ್ಟು ಗ್ರಾಮೀಣ ಪೋಷಕರು ಇನ್ನೂ ಶುಲ್ಕವನ್ನೇ ಕಟ್ಟಿಲ್ಲ, ಆ ಶುಲ್ಕ ಯಾರು ಕೊಡುತ್ತಾರೆ? ಅದನ್ನು ದಯಮಾಡಿ ತಿಳಿಸಿ. ಶಿಕ್ಷಣ ಇಲಾಖೆಯನ್ನೇ ಈ ರೀತಿ ನಡೆಸಿಕೊಳ್ಳುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ದಯಮಾಡಿ ಯಾವುದೇ ಆದೇಶ ಮಾಡುವಾಗ ಪೂರ್ವಾಪರ ಯೋಚಿಸಿ ಆದೇಶ ನೀಡಬೇಕೆಂದು ಸಚಿವ ಸುರೇಶ್ ಕುಮಾರ್‌ಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.