ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗೆ ಈಗಲಾದರೂ ಎಂದು ಸ್ಪಂದಿಸಬೇಕು ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಎಸ್ವೈ ರಾಜ್ಯದ ಎಲ್ಲಾ ಭಾಗವನ್ನು ಸಮಾನ ರೀತಿಯಲ್ಲಿ ಕಾಣಬೇಕು ಎಂದರು. ಇನ್ನು, ಸಿಪಿ ಯೋಗೇಶ್ವರ್ ಭೇಟಿ ಬಗೆಗಿನ ಊಹಪೋಹಗಳಿಗೆ ತೆರೆ ಎಳೆದ ಅವರು, ನಾನು ಮತ್ತು ಯೋಗೇಶ್ವರ್ ಆಪ್ತರು ಹಾಗೂ ರಾಜಕೀಯ ಮೀರಿದ ಒಡನಾಡಿಗಳು. ಅವರು ನಮ್ಮ ಪಕ್ಕದ ಜಿಲ್ಲೆಯವರು. ಹಾಗಾಗಿ ಆಗಾಗ ಭೇಟಿ ಮಾಡ್ತಾ ಇರ್ತೇವೆ. ಅವರು ಬಿಜೆಪಿಯಲ್ಲಿ ಆರಾಮಾಗಿ ಇದ್ದಾರೆ. ಹಾಗಾಗಿ ನಾನು ಅವರನ್ನು ಕಾಂಗ್ರೆಸ್ಗೆ ಕರೆ ತರುವ ಪ್ರಯತ್ನ ಮಾಡ್ತಿಲ್ಲ. ಅವರು ನನ್ನನ್ನು ಬಿಜೆಪಿಗೆ ಬಾ ಎಂದು ಹೇಳಿಯೂ ಇಲ್ಲ. ರಾಜಕೀಯ ಮಾಡುವಾಗ ಪಕ್ಕಾ ರಾಜಕೀಯ ಮಾಡ್ತೇವೆ. ಉಳಿದ ಸಮಯದಲ್ಲಿ ನಾವು ಪ್ಲೆಕ್ಸಿಬಲ್ ಆಗಿರ್ತೇವೆ. ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಇಲ್ಲ ಅಂತ ಬಿಜೆಪಿಗೆ ಹೋಗಿದ್ದಾರೆ ಎಂದರು.
ಕೇಂದ್ರದ ನೆರವು ಸಮಾಧಾನಕರವಲ್ಲ..!
ಕೇಂದ್ರ ಸರ್ಕಾರ 1200 ಕೋಟಿ ಮೊತ್ತದ ಪರಿಹಾರ ಧನ ಬಿಡುಗಡೆ ಮಾಡಿದೆ. ಗೃಹ ಸಚಿವ ಅಮಿತ್ ಶಾ ಬಂದು ಹೋದ ತಕ್ಷಣ ಈ ಮೊತ್ತ ನೀಡಿದ್ರೆ ಅನುಕೂಲವಾಗುತ್ತಿತ್ತು. ಈಗ ಕೊಟ್ಟಿರುವ ಹಣದ ಬಗ್ಗೆ ಸಮಾಧಾನ ಏನೂ ಇಲ್ಲ. ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು. ಬೇರೆ ರಾಜ್ಯಕ್ಕೆ ಏನು ಒತ್ತು ಕೊಡುತ್ತಿದ್ದಾರೆ ಬಿಜೆಪಿಯವರು ನಮ್ಮ ರಾಜ್ಯಕ್ಕೂ ಅದೇ ರೀತಿ ಒತ್ತುಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ರೆ ಉತ್ತಮ
ಇನ್ನು, ಕಾಂಗ್ರೆಸ್ನಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ವಿಚಾರd ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಿದ್ರೆ ಉತ್ತಮ. ಪಕ್ಷ, ರಾಜ್ಯ, ಹೋರಾಟದ ವಿಚಾರಕ್ಕೆ ಬಂದ್ರೆ ಸಿದ್ದರಾಮಯ್ಯ ವಿಪಕ್ಷ ನಾಯಕನಾಗೋದು ಉತ್ತಮ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ. ಆದರೆ ನಮ್ಮ ಉನ್ನತ ಮಟ್ಟದ ನಾಯಕರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಅದು ಬೇಗನೆ ಸರಿ ಹೋಗಲಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಂತಹ ಉನ್ನತ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉತ್ತಮ ಎಂದರು.