ಬೆಂಗಳೂರು: ನಿಮ್ ಕೈಯಾಗಿನ ಗುಲಾಮನಾಗಿದ್ದೀನಾ ಎಂದು ಆಡಳಿತ ಪಕ್ಷದ ಸದಸ್ಯ ಪ್ರಾಣೇಶ್ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್ ವಿತ್ತೀಯ ಕಲಾಪದಲ್ಲಿ ನಡೆಯಿತು. ವಿಧಾನ ಪರಿಷತ್ ಶೂನ್ಯವೇಳೆ ಮುಗಿದ ನಂತರ ವಿತ್ತೀಯ ಕಲಾಪ ಕೈಗೆತ್ತಿಕೊಳ್ಳಲಾಯಿತು.
ಇನ್ನು 25 ಸದಸ್ಯರು ಬಜೆಟ್ ಮೇಲೆ ಮಾತನಾಡಬೇಕಿದ್ದು ಸಮಯ ಹಂಚಿಕೆ ಕುರಿತು ಚರ್ಚೆ ನಡೆಯಿತು. ಆಡಳಿತ ಪಕ್ಷದ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ನವರು 8 ಗಂಟೆ, ಜೆಡಿಎಸ್ 7 ಗಂಟೆ ಬಿಜೆಪಿ ಸದಸ್ಯರು 4 ಗಂಟೆ ಮಾತನಾಡಿದ್ದಾರೆ. ಹಾಗಾಗಿ ನಮಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಮಾತನಾಡಿ, ನಮ್ಮಲ್ಲೂ ಮಾತನಾಡುವವರಿದ್ದಾರೆ, ಎಲ್ಲರಿಗೂ 20 ನಿಮಿಷ ಕಾಲಾವಕಾಶ ಕೊಟ್ಟು ಮುಗಿಸಿಬಿಡಿ ಎಂದು ಮನವಿ ಮಾಡಿದರು. ಬಿಜೆಪಿ ಸದಸ್ಯ ಲಕ್ಣ್ಮಣ ಸವದಿ ಮಾತನಾಡಿ, ಪಾರ್ಲಿಮೆಂಟ್ ರೀತಿ ಸದಸ್ಯರ ಸಂಖ್ಯಾಬಲಕ್ಕೆ ತಕ್ಕ ರೀತಿ ಮಾತನಾಡುವವರ ಸಮಯ ನಿಗದಿಪಡಿಸುವಂತಾಗಬೇಕು. ಆ ಪದ್ದತಿ ಜಾರಿಗೊಳಿಸಿ ಎಂದು ಮನವಿ ಮಾಡಿದರು.
ಬಿಜೆಪಿಯ ಪ್ರಾಣೇಶ್ ಮಾತನಾಡಿ, ಪ್ರತಿಯೊಬ್ಬ ಸದಸ್ಯರಿಗೆ ಬಜೆಟ್ ಮೇಲೆ ಮಾತನಾಡಲು 22 ನಿಮಿಷ ನಿಗದಿಪಡಿಸಿದ್ದಿರಿ. ಆದರೆ ನಿಮ್ಮ ಆದೇಶ ಪಾಲನೆ ಆಗಿಲ್ಲ, ಆಗಿದ್ದರೆ ಎಲ್ಲರಿಗೂ ಅವಕಾಶ ಸಿಗುತ್ತಿತ್ತು ಎಂದರು. ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಎಲ್ಲರೂ ಗಂಟೆಗಟ್ಟಲೆ ಭಾಷಣ ಹೊಡೆದರೆ ನಾನೇನು ಮಾಡಲು ಸಾಧ್ಯ. ಈಗ ಇರುವಂತೆ 25 ಸದಸ್ಯರು ಬಾಕಿ ಇದ್ದಾರೆ ಎಲ್ಲರಿಗೂ 15 ನಿಮಿಷ ಕೊಡಲಾಗುತ್ತದೆ. ನನ್ನನ್ನು ಫ್ರೀಯಾಗಿ ಬಿಡಿ ನಾನು ಸದನ ನಡೆಸಿಕೊಂಡು ಹೋಗುತ್ತೇನೆ ಎಂದು ವಿತ್ತೀಯ ಕಲಾಪ ಆರಂಭಿಸಿ ಬಿಜೆಪಿ ಸದಸ್ಯರಿಗೆ 15 ನಿಮಿಷ ಕಾಲಾವಕಾಶ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರಾಣೇಶ್, ಹೊಸಬರಿಗೆ ಸ್ವಲ್ಪ ಹೆಚ್ಚು ಸಮಯ ಕೊಡಿ, ಹಳಬರಿಗೆ ಬೇಕಾದಲ್ಲಿ ಕಡಿಮೆ ಮಾಡಿ ಎಂದರು. ಇದಕ್ಕೆ ಸಿಡಿಮಿಡಿಗೊಂಡ ಸಭಾಪತಿ ಹೊರಟ್ಟಿ ನಿಮ್ ಕೈಯಾಗಿನ ಗುಲಾಮನಾಗಿದ್ದೀನಾ ಎನ್ನುತ್ತಾ ವಿತ್ತೀಯ ಕಲಾಪ ಕೈಗೆತ್ತಿಕೊಂಡರು.
ಇದನ್ನೂ ಓದಿ: ಈಗ ಬೆದರಿಕೆಗೆ ಮಣಿಯುವ ಸರ್ಕಾರ ಇಲ್ಲ, ಈಗ ಇರುವುದು ಬಿಜೆಪಿ ಗವರ್ನಮೆಂಟ್: ಸಿ.ಟಿ.ರವಿ