ಬೆಂಗಳೂರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಎಸ್‌ಟಿ) ಅಡಿ ನಿಯೋಜನೆಗೊಂಡ 200ಕ್ಕೂ ಅಧಿಕ ಗುತ್ತಿಗೆ ನೌಕರರು ಇಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸಿದರು. ಕೋವಿಡ್ ನಿಯಂತ್ರಣಕ್ಕೆ ಬಂದ ವೇಳೆ ವಿವಿಧ ಆರೋಗ್ಯ ಯೋಜನೆಯಡಿ ಗುತ್ತಿಗೆ ನೌಕರರಿಂದ ಕೆಲಸ ಮಾಡಿಸಿಕೊಳ್ಳಲಾಗಿದೆ. ಅದೇ ರೀತಿ ಈಗಲೂ ಬೇರೆ ಬೇರೆ ಯೋಜನೆಯಡಿ ನಮ್ಮ ಸೇವೆ ಮುಂದುವರಿಸಲಿ. ಅರ್ಧದಲ್ಲಿ ಕೈಬಿಡಬಾರದು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೋವಿಡ್ ಮಿತಿ ಮೀರಿದ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದ ಆರೋಗ್ಯ ಮಿತ್ರರ ಜೀವನವೇ ಈಗ ಅತಂತ್ರವಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ 10 ಸಾವಿರಕ್ಕೂ ಅಧಿಕ ಆರೋಗ್ಯ ಸಿಬ್ಬಂದಿ ಮಾ.31ರ ಬಳಿಕ ಉದ್ಯೋಗ ಕಳೆದುಕೊಂಡು ಬೀದಿಗೆ ಬರುವ ಆತಂಕಕ್ಕೆ ಸಿಲುಕಿದ್ದೇವೆ. ಇನ್ನೊಂದೆಡೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸೇವೆ ಸಲ್ಲಿಸುತ್ತಿರುವ 30 ಸಾವಿರಕ್ಕೂ ಅಧಿಕ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಅಳಲು ತೋಡಿಕೊಂಡರು.
10 ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕ : ಕರ್ನಾಟಕದಲ್ಲಿ 2020ರ ಮಾ.8ರಂದು ಮೊದಲ ಕೋವಿಡ್ ಪ್ರಕರಣ ಪತ್ತೆಯಾಯಿತು. ಜೂನ್ ವೇಳೆಗೆ ಸೋಂಕು ಉಲ್ಬಣಗೊಂಡು ಲಾಕ್ಡೌನ್ ವಿಧಿಸಲಾಯಿತು. ಆಗ ಸೋಂಕು ನಿಯಂತ್ರಣ, ನಿರ್ವಹಣೆ ಕಾರ್ಯಕ್ಕೆ ಅಂದಾಜು 10 ಸಾವಿರಕ್ಕೂ ಅಧಿಕ ಸಹಾಯಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಯಿತು.
ಬಡತನ ಮತ್ತು ನಿರುದ್ಯೋಗದಿಂದ ಬಳಲುತ್ತಿದ್ದ ಯುವ ಜನರು ಗುತ್ತಿಗೆ ಆಧಾರದಲ್ಲಿ ಕಡಿಮೆ ಹಣಕ್ಕೆ ಜೀವ ಪಣಕ್ಕಿಟ್ಟು, ಕೊರೊನಾ ವಾರಿಯರ್‌ಗಳಾಗಿ ಈವರೆಗೂ ಸೇವೆ ಸಲ್ಲಿಸಿದ್ದಾರೆ. ಈಗ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ನಿಮ್ಮ ಅವಶ್ಯಕತೆ ಇಲ್ಲವೆಂದು ಮಾ.31ಕ್ಕೆ ಸೇವೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ನೌಕರರು ತಿಳಿಸಿದರು.
ದಿನದ 15 ಗಂಟೆ ಕೆಲಸ : ಕೊರೊನಾ ನಿಯಂತ್ರಣಕ್ಕಾಗಿ ಗುತ್ತಿಗೆ ಆಧಾರದಲ್ಲಿ ದಿನದ 15 ಗಂಟೆಗೂ ಅಧಿಕ ಕಾಲ ರಜೆ ಇಲ್ಲದೆ ಕಾರ್ಯ ನಿರ್ವಹಿಸಿದ್ದೇವೆ. ಈ ಪೈಕಿ 1 ಸಾವಿರ ವೈದ್ಯರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಫೀವರ್ ಕ್ಲಿನಿಕ್ ಪರೀಕ್ಷೆ ವರದಿ, ಕ್ವಾರಂಟೈನ್, ಕಂಟೆಂಟ್ ನಿರ್ಮಾಣ ಹಾಗೂ ಸೀಲ್‌ಡೌನ್ ಮಾಡುವ ಕಾರ್ಯ ಕೂಡ ಮಾಡಿದ್ದೇವೆ. ಉಳಿದಂತೆ ಅಂದಾಜು 1 ಸಾವಿರ ದತ್ತಾಂಶ ಸಂಗ್ರಹಣೆಗಾರರು ಹಾಗೂ 3 ಸಾವಿರಕ್ಕೂ ಅಧಿಕ ಡಿ ಗ್ರೂಪ್ ನೌಕರರು ಸೇವೆ ಮಾಡಿದ್ದಾರೆ. ಈಗಾಗಲೇ 2 ಸಾವಿರ ಜನ ಉದ್ಯೋಗ ಕಳೆದುಕೊಂಡಿದ್ದು, ಬಾಕಿ 10 ಸಾವಿರ ಆರೋಗ್ಯ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಭದ್ರತೆಯಲ್ಲೇ ಸೇವೆ : ಕೊರೊನಾ ವೇಳೆ ಗುತ್ತಿಗೆ ಆಧಾರದಲ್ಲಿ ನಿಯೋಜನೆಗೊಂಡ ಆರೋಗ್ಯ ಸಿಬ್ಬಂದಿಯನ್ನು ಪ್ರತಿ ಕೋವಿಡ್ ಅಲೆ ಪೂರ್ಣಗೊಂಡಾಗಲೂ ಕೆಲಸದಿಂದ ತೆಗೆಯುವುದಾಗಿ ಹೇಳಲಾಗುತ್ತದೆ. ಮುಕ್ತಾಯದವರೆಗೆ 2 ವರ್ಷ ಸೇವೆ ಪಡೆದುಕೊಳ್ಳಲಾಗಿದೆ. ಇದರಲ್ಲಿ ಡಿ ಗ್ರೂಪ್ ಸಿಬ್ಬಂದಿಗೆ 10 ಸಾವಿರ ರೂ, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಸ್ವಾಬ್ ಕಲೆಕ್ಟರ್‌ಗಳಿಗೆ 15 ಸಾವಿರ ರೂ ಹಾಗೂ ವೈದ್ಯರಿಗೆ 20-25 ಸಾವಿರ ರೂ.ವರೆಗೆ ವೇತನ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯು ವೇತನಕ್ಕಾಗಿ ಸಿಬ್ಬಂದಿ ಖರ್ಚು ಮಾಡುವ ಒಟ್ಟು ವೆಚ್ಚದಲ್ಲಿ ಶೇ.3 ಹಣ ಖರ್ಚು ಮಾಡಿದರೆ ಗುತ್ತಿಗೆ ಸಿಬ್ಬಂದಿಯ ಸೇವೆ ಮುಂದುವರಿಸಬಹುದಾಗಿದೆ ಎಂದು ಪ್ರತಿಭಟನಾ ನಿರತ ನೌಕರರು ತಿಳಿಸಿದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್ವೈ ವಿರುದ್ಧ ಎಸಿಬಿಗೆ ದೂರು