ಬೆಂಗಳೂರು: ಪ್ರತಿಪಕ್ಷ ನಾಯಕನ ಆಯ್ಕೆ ಸಂಬಂಧ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನು ಮಧುಸೂದನ್ ಮಿಸ್ತ್ರಿ ಅವರು ಸಂಗ್ರಹಿಸುತ್ತಿದ್ದಾರೆ. ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕನ ಸ್ಥಾನ ಮತ್ತು ವಿಪ್ ಯಾರಾಗಬೇಕೆಂಬ ಅಭಿಪ್ರಾಯ ಪಡೆಯುತ್ತಿದ್ದಾರೆ. ಹೈಕಮಾಂಡ್ ಒಬ್ಬರನ್ನು ಆಯ್ಕೆ ಮಾಡಲಿದೆ. ಅದರಲ್ಲಿ ಸಿದ್ದರಾಮಯ್ಯ ಮತ್ತು ಹೆಚ್.ಕೆ.ಪಾಟೀಲ್ ಮುಂಚೂಣಿಯಲ್ಲಿದ್ದಾರೆ. ಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನದ ಬಗ್ಗೆಯೂ ಪರಿಷತ್ ಸದಸ್ಯರ ಅಭಿಪ್ರಾಯ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿ, ಭಿನ್ನಮತವಿಲ್ಲದೆ ಪಕ್ಷ ಕಟ್ಟಬೇಕು. ಹೀಗಾಗಿ ಪಕ್ಷವನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲವನ್ನೂ ತಿಳಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಚರ್ಚೆಯಾಗುತ್ತಿದೆ. ಆದರೆ ಏನನ್ನೂ ಹೇಳುವುದಿಲ್ಲ. ವೈಯುಕ್ತಿಕವಾಗಿ ಅಭಿಪ್ರಾಯ ತಿಳಿಸಿದ್ದೇನೆ ಎಂದು ಹೇಳಿದರು.
ರಾಣೆಬೆನ್ನೂರು ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಈ ಬಾರಿ ನಾನೇ ನಿಲ್ಲುತ್ತೇನೆ. ಮುಂದೆ ಪುತ್ರ ಕಣಕ್ಕಿಳಿಯುತ್ತಾನೆ. ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.