ಬೆಂಗಳೂರು: ರಾಜಧಾನಿಗೆ ಉದ್ಯಾನ ನಗರಿ ಎಂಬ ವಿಶೇಷಣವನ್ನು ಅಂಟಿಸಲು ಕಾರಣವಾಗಿರುವ ಪಾರ್ಕ್ಗಳೆಲ್ಲ ಅಭಿವೃದ್ಧಿಯಿಂದ ದೂರ ಉಳಿದಿವೆ. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಉದ್ಯಾನವನಗಳೇ ತುಂಬಿದ್ದ ಜಾಗದಲ್ಲಿ ಈಗ ಮುಗಿಲೆತ್ತರದ ಕಟ್ಟಡಗಳನ್ನು ಕಾಣಬಹುದು. ರಸ್ತೆಯೇ ಕಾಣದ ರೀತಿ ಕಾಂಕ್ರಿಟ್ ಕಾಡಾಗಿ ಬೆಳೆದಿದೆ. ಈ ಮಧ್ಯೆ ನಗರದ ತಾಪಮಾನವನ್ನು ನಿಯಂತ್ರಿಸಬಲ್ಲ ಮತ್ತು ಸೌಂದರ್ಯವನ್ನು ಹೆಚ್ಚಿಸಬಲ್ಲ ಉದ್ಯಾನವನಗಳೂ ಇವೆ. ಆದರೆ, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಅದಲ್ಲದೆ, ಪಾರ್ಕ್ಗಳ ನಿರ್ವಹಣೆ ಹಾಗೂ ಭೂಗಳ್ಳರಿಂದ ರಕ್ಷಣೆಯೂ ಅಷ್ಟೇ ಸವಾಲಾಗಿದೆ. ಮಳೆ ನೀರುಗಾಲುವೆಗಳು, ಕೆರೆಗಳ ಒತ್ತುವರಿ, ಬಫರ್ ಝೋನ್ಗಳ ಒತ್ತುವರಿ ಎಗ್ಗಿಲ್ಲದೆ ನಡೆದಿದೆ. ಪಾರ್ಕ್ ಜಾಗಗಳು ಸೀಮಿತವಾಗಿರುವುದರಿಂದ ಮೊದಲೇ ಬೇಲಿ (ಫೆನ್ಸಿಂಗ್) ಹಾಕಿ ರಕ್ಷಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪಾರ್ಕ್ಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗವಿದ್ದರೂ ಪ್ರಯೋಜನ ಇಲ್ಲವಾಗಿದೆ. ಇನ್ನು ಕಬ್ಬನ್ ಪಾರ್ಕ್, ಲಾಲ್ಬಾಗ್ನಂತಹ ಬೃಹತ್ ಉದ್ಯಾನಗಳನ್ನು ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತಿದೆ.
ರಾಜಧಾನಿಯಲ್ಲಿ ಪಾರ್ಕ್ಗಳ ವಿವರ
ಬಿಬಿಎಂಪಿ ವಲಯ | ಪೂರ್ವ | ಪಶ್ಚಿಮ | ದಕ್ಷಿಣ | ಯಲಹಂಕ | ಬೊಮ್ಮನಹಳ್ಳಿ | ಆರ್.ಆರ್.ನಗರ | ಮಹದೇವಪುರ | ದಾಸರಹಳ್ಳಿ | ಒಟ್ಟು |
ಪಾರ್ಕ್ಗಳ ಸಂಖ್ಯೆ | 278 | 213 | 345 | 112 | 120 | 157 | 26 | 37 | 1,288 |
ಗುತ್ತಿಗೆದಾರರ ನಿರ್ವಹಣೆಗೆ 696 ಪಾರ್ಕ್ಗಳು
ನಗರದಲ್ಲಿ ಒಟ್ಟು 1,288 ಪಾರ್ಕ್ಗಳ ಪೈಕಿ 1,247 ಅಭಿವೃದ್ಧಿಪಡಿಸಿದ, ನೂತನ ಉದ್ಯಾನಗಳು ಸೇರಿದಂತೆ 278 ಪಾರ್ಕ್ಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ತೋಟಗಾರಿಕಾ ವಿಭಾಗದ ಉಪನಿರ್ದೇಶಕ ಎಸ್.ಗಂಗಾಧರ್ ಸ್ವಾಮಿ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. 696 ಪಾರ್ಕ್ಗಳು ಖಾಸಗಿ ಗುತ್ತಿಗೆದಾರರು, 429 ಉದ್ಯಾನಗಳನ್ನು ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿದೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ, ಸ್ವಚ್ಛತೆಯಿಂದ ದೂರ ಉಳಿದಿವೆ. ಎಷ್ಟೋ ಗಿಡ-ಮರಗಳು ಒಣಗಿ ಹೋಗುತ್ತಿವೆ. ಇತ್ತ ವಾಯುವಿಹಾರಿಗಳೂ ಹೆಜ್ಜೆ ಇಡಲು ಹಿಂದು-ಮುಂದು ನೋಡುತ್ತಾರೆ.
ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಮಾತನಾಡಿ, ಬಿಬಿಎಂಪಿ ಪಾರ್ಕ್ಗಳಿಗೆ ನಿರ್ವಹಣೆ ಕೊರತೆ ಇದ್ದು, ಹಲವೆಡೆ ಅನ್ಯ ಉದ್ದೇಶಗಳಿಗೆ ಬಳಕೆಯಾಗಿರುವುದು ದುರಂತ. ಪಾಲಿಕೆ ಕೋರ್ ಏರಿಯಾಗಳಲ್ಲಿ ಫೆನ್ಸಿಂಗ್ ಹಾಕಿರುವುದರಿಂದ ಒತ್ತುವರಿಯಾಗುತ್ತಿಲ್ಲ. ಆದರೆ, ಬಿಡಿಎ ನಿರ್ಮಿಸಿರುವ ಹೊಸ ಲೇಔಟ್ಗಳಲ್ಲಿ ಜಾಗ ಗುರುತಿಸಿದ್ದರೂ ಇನ್ನೂ ಪಾರ್ಕ್ ಅಭಿವೃದ್ಧಿಪಡಿಸಿಲ್ಲ. ಪಾರ್ಕ್ಗಳಲ್ಲಿ ಗಿಡ ನೆಡುತ್ತೇವೆ ಎಂದು ಹೇಳುತ್ತಿರುವ ಬಿಬಿಎಂಪಿ, ಇದರ ಸರಿಯಾದ ಲೆಕ್ಕ ಕೊಡುವಲ್ಲಿ ಹಿಂದೇಟು ಹಾಕುತ್ತಿದೆ. ಈ ವಿಚಾರದಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಹೆಚ್ಚು ಎಂದರು.