ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಕೂಡಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್, ಸರ್ಕಾರಕ್ಕೆ ನಿರ್ದೇಶಿದೆ.
ಕಾರಾಗೃಹಗಳಲ್ಲಿ ಕೈದಿಗಳಿಗೆ ಅಗತ್ಯ ಸೌಲಭ್ಯಗಳಿಲ್ಲದೆ ಕೊರೊನಾ ಭಯದಲ್ಲಿ ಜೀವಿಸುತ್ತಿದ್ದಾರೆ ಎಂದು ಆರೋಪಿಸಿ ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಬದಲಿಸಿಕೊಂಡಿದೆ. ಈ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರ ವಾದ ಆಲಿಸಿದ ಪೀಠ, ಸರ್ಕಾರದ ವರದಿಯಂತೆ ರಾಜ್ಯದ 51ರ ಪೈಕಿ 20 ಕಾರಾಗೃಹಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದಾರೆ. ಜೈಲುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದೀರಿ. ಆದರೆ ಸರ್ಕಾರ ನೀಡಿರುವ ವರದಿ ಪರಿಪೂರ್ಣವಾಗಿಲ್ಲ. ಇನ್ನೂ ಕೆಲವು ವಿಚಾರಗಳ ಬಗ್ಗೆ ಸ್ಪಷ್ಟನೆ ಬೇಕಿದೆ. ಈ ನಿಟ್ಟಿನಲ್ಲಿ ಕಾರಾಗೃಹಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆಗೊಳಿಸುವ ಕುರಿತು, ಪೌಷ್ಟಿಕ ಆಹಾರ ಪೂರೈಸುವ ಬಗ್ಗೆ ಹಾಗೂ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವರದಿ ಸಲ್ಲಿಸಬೇಕು. ಇನ್ನು 86 ವೈದ್ಯಕೀಯ ಹುದ್ದೆಗಳು ಖಾಲಿ ಇರುವ ಕುರಿತು ಮಾಹಿತಿ ನೀಡಿದ್ದು, ಅವುಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಎಷ್ಟಿದೆ? ಮನೋವೈದ್ಯರ ಸಂಖ್ಯೆ ಎಷ್ಟಿದೆ ಎಂಬ ಕುರಿತು ಮಾಹಿತಿ ನೀಡಬೇಕು.
ಖಾಲಿ ಇರುವ ವೈದ್ಯರ, ದಾದಿಯರ ಹುದ್ದೆಗಳನ್ನು ತುಂಬಲು ಸರ್ಕಾರ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದರೆ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರನ್ನೇ ವರ್ಗಾವಣೆ ಮಾಡುವ ಮೂಲಕ ಹುದ್ದೆಗಳನ್ನು ತುಂಬಬಹುದು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮೇ ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಿ ಜೂನ್ 4ಕ್ಕೆ ವಿಚಾರಣೆ ಮುಂದೂಡಿತು.