ಬೆಂಗಳೂರು : ಯುಪಿಎಸ್ಸಿ ಮಾದರಿಯಲ್ಲೇ ಕೆಪಿಎಸ್ಸಿ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಕರ್ನಾಟಕ ಲೋಕಸೇವಾ ಆಯೋಗ ಎಚ್ಚೆತ್ತಿರುವಂತಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಮಾಡಲಾಗುತ್ತಿದೆ. ಕಿವಿಯೋಲೆಗೂ ನಿಷೇಧ ಹೇರಲಾಗಿದೆ. ಮುಂದೂಡಲಾಗಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆ ನಾಳೆ ನಡೆಯಲಿದೆ. ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದೆ.
ನಾಳೆ ಬೆಳಗ್ಗೆ 10 ರಿಂದ 11:30ರವರೆಗೆ ಸಾಮಾನ್ಯ ಜ್ಞಾನ, ಮಧ್ಯಾಹ್ನ 2 ರಿಂದ 3.30ರವರೆಗೆ ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ. ನಾಳೆ ರಾಜ್ಯದ 1,057 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
433 ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. ಒಟ್ಟು 3.74 ಲಕ್ಷ ಅಭ್ಯರ್ಥಿಗಳಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, 1,253 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಜ.24ರಂದು ನಿಗದಿಯಾಗಿದ್ದ ಪರೀಕ್ಷೆ ಇದಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಂದೂಡಿಕೆಯಾಗಿತ್ತು. ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 78 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ.. ರೈತರನ್ನ ಭಯೋತ್ಪಾದಕರು ಎಂದ ಪ್ರಕರಣ.. ತುಮಕೂರಲ್ಲಿರುವ ಕೇಸ್ ರದ್ದು ಕೋರಿ ಕಂಗನಾ ಹೈಕೋರ್ಟ್‌ಗೆ ಮೊರೆ
ಪರೀಕ್ಷಾ ಸಾಮಗ್ರಿಗಳನ್ನು ಗೌಪ್ಯವಾಗಿಡಲು ವ್ಯವಸ್ಥೆ ಮಾಡಲಾಗಿದೆ. ಪಿಯು ಪರೀಕ್ಷಾ ಮಂಡಳಿಯ ರೀತಿ ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಳವಡಿಕೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಬ್ಲೂ ಟೂಥ್, ವೈಫೈ, ಮೈಕ್ರೋಚಿಪ್, ಎಲೆಕ್ಟ್ರಾನಿಕ್ ಹಾಗೂ ಲೋಹದ ವಸ್ತುಗಳನ್ನು ಕೊಂಡೊಯ್ಯದಂತೆ ನಿಗಾವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದೆ.
ಪರೀಕ್ಷಾ ಸಾಮಗ್ರಿ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ನಿರೀಕ್ಷಕರನ್ನು ನೇಮಕ ಮಾಡಲಾಗಿದೆ. ದಿನದ 24 ಗಂಟೆಯೂ ಶಿಫ್ಟ್ ಪ್ರಕಾರ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ. ಸತ್ಯಾವತಿ ಹೇಳಿಕೆ ನೀಡಿದ್ದಾರೆ.