ಬೆಂಗಳೂರು: ರಾಜ್ಯ ಸರ್ಕಾರವೇ ಖಾಸಗಿ ಆಸ್ಪತ್ರೆಗಳ ಜತೆ ಒಳ ಒಪ್ಪಂದ ಮಾಡಿಕೊಂಡು ಯುವ ಸಮುದಾಯಕ್ಕೆ ಕೋವಿಡ್ ಲಸಿಕೆಯನ್ನು ದುಬಾರಿ ದರದಲ್ಲಿ ಮಾರಾಟವಾಗುವಂತೆ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಯು.ಟಿ. ಖಾದರ್, ಎಚ್.ಎಂ. ರೇವಣ್ಣ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 18 ರಿಂದ 45 ರ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಿಕೆ ಔಪಚಾರಿಕವಾಗಿ ಉದ್ಘಾಟಿಸಿ ನಿಲ್ಲಿಸಿದೆ. ಸರ್ಕಾರ ಲಸಿಕೆ ನೀಡುತ್ತಿಲ್ಲ. ಬದಲಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಲೆಗೆ ಲಸಿಕೆ ಕೊಡಿಸುವ ಕಾರ್ಯಕ್ಕೆ ಉತ್ತೇಜಿಸುವ ಮೂಲಕ ಮತ್ತೊಮ್ಮೆ ಭ್ರಷ್ಟಾಚಾರಕ್ಕೆ ಮುಂದಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬೆಲೆಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದೆ. ಇದಕ್ಕೆ ಕಾರಣವೇನು? ಲಸಿಕೆ ಸಿಗುತ್ತಿಲ್ಲ ಎಂದ ಮೇಲೆ ಖಾಸಗಿಯವರಿಗೆ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರ ಎಲ್ಲರಿಗೂ ಸರಿಯಾಗಿ ಲಸಿಕೆ ನೀಡುತ್ತಿಲ್ಲ:
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗ್ತಿದೆ. ಎಲ್ಲರಿಗೂ ಲಸಿಕೆ ಸರಿಯಾಗಿ ನೀಡ್ತಿಲ್ಲ. ಫ್ರಂಟ್ ಲೈನ್ ವಾರಿಯರ್ಸ್ಗೆ ಲಸಿಕೆ ನೀಡ್ತಿಲ್ಲ. ಸುಗುಣ, ಅಪೊಲೋ, ಮಣಿಪಾಲ್ ಮತ್ತಿತರ ಆಸ್ಪತ್ರೆಗಳಲ್ಲಿ 750 ರಿಂದ 1200 ರೂ.ವರೆಗೆ ನೀಡಲಾಗ್ತಿದೆ. ಅಪೋಲೋದಲ್ಲಿ 1400 ರೂ. ಕೋವ್ಯಾಕ್ಸಿನ್ಗೆ ತೆಗೆದುಕೊಳ್ತಾರೆ. ಕೋವಿಶೀಲ್ಡ್ಗೆ 850-900 ರೂ ತೆಗೆದುಕೊಳ್ತಿದ್ದಾರೆ. ಯಾರು ಬೇಕಾದರೂ ಹಣ ಕೊಟ್ಟು ಲಸಿಕೆ ಪಡೆಯಬಹುದು. ಸರ್ಕಾರ ಖಾಸಗಿಯವರಿಗೆ ಉತ್ತೇಜನ ನೀಡ್ತಿದೆ. ಇದು ಕೂಡ ಕಾಳಸಂತೆಗೆ ಅವಕಾಶ ಕೊಟ್ಟಂತೆ. ಸಾಮಾನ್ಯ ಜನರು ದುಬಾರಿ ಹಣ ಕೊಟ್ಟು ತೆಗೆದುಕೊಳ್ತಾರಾ? ಸರ್ಕಾರವೇ ಖಾಸಗಿಯವರ ಜೊತೆ ಪಾಲುದಾರನಾಗಿದೆ. 200 ರೂ. ಲಸಿಕೆಗೆ 1200 ರೂ. ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಬ್ಲಾಕ್ ಫಂಗಸ್ನಿಂದ ಹೆಚ್ಚು ಜನ ಸಾಯ್ತಿದ್ದಾರೆ. ಇದಕ್ಕೆ ಬೇಕಾದ ಔಷಧ ಸರ್ಕಾರದ ಬಳಿಯಿಲ್ಲ. ಸಂಸದ ತೇಜಸ್ವಿ ಸೂರ್ಯ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಕೊಡಿಸುತ್ತೇವೆ ಎಂದು ಜಾಹೀರಾತು ನೀಡುತ್ತಿದ್ದಾರೆ. ಜವಾಬ್ದಾರಿ ಮೆರೆಯುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ: ಮಾಜಿ ಸಚಿವ ಯು.ಟಿ. ಖಾದರ್ ಮಾತನಾಡಿ, ರಾಜ್ಯದ ಪ್ರತಿಯೊಂದು ಕುಟುಂಬ ನೋವಲ್ಲಿದೆ. ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಆತಂಕಗೊಂಡಿದ್ದಾರೆ. ಜನ ಆಹಾರವಿಲ್ಲದೇ ಪರದಾಡ್ತಿದ್ದಾರೆ. ಆಹಾರ ಭದ್ರತೆ ಕಾಯ್ದೆಯನ್ನೇ ವಿಫಲಗೊಳಿಸಿದ್ದಾರೆ. ಅನ್ನಭಾಗ್ಯದ ಅಕ್ಕಿಯನ್ನೇ ಕಡಿತ ಮಾಡಿದ್ದಾರೆ. ಕೊಡುವ ಅಕ್ಕಿಯನ್ನೂ ಸರಿಯಾಗಿ ಕೊಡ್ತಿಲ್ಲ. ಪಡಿತರ ಸರ್ವರ್ ವ್ಯವಸ್ಥೆ ಹಾಳಾಗಿದೆ. ಸರ್ಕಾರ ಸರ್ವರ್ ಹೆಚ್ಚು ಮಾಡೋಕೆ ಆಗಿಲ್ಲ. ಪಡಿತರದಾರರಿಗೆ ಇದರಿಂದ ಅಕ್ಕಿ ಸಿಗ್ತಿಲ್ಲ ಎಂದು ಹೇಳಿದರು.
ವಿಶ್ವದಲ್ಲಿ 22 ಕಂಪನಿ ಲಸಿಕೆ ತಯಾರಿಸುತ್ತಿವೆ. ಸರ್ಕಾರ ಎರಡು ಕಂಪನಿಯಿಂದ ಅಷ್ಟೇ ಖರೀದಿಸುತ್ತಿದೆ. ಗ್ಲೋಬಲ್ ಟೆಂಡರ್ ಕರೆದಿದ್ದೇವೆ ಎಂದಿದ್ದಾರೆ. ಕೇವಲ ರಷ್ಯಾದಿಂದ ಸ್ಪುಟ್ನಿಕ್ ಮಾತ್ರ ಖರೀದಿ ಮಾಡ್ತಿದ್ದಾರೆ. ಉಳಿದ ಸಂಸ್ಥೆಗಳಿಂದ ಲಸಿಕೆ ಖರೀದಿ ಮಾಡ್ತಿಲ್ಲ. ಹೀಗಾಗಿ ಲಸಿಕೆ ಸರಿಯಾಗಿ ಲಭ್ಯವಾಗ್ತಿಲ್ಲ. ಲಸಿಕೆ ಇಲ್ಲದೇ ನೂರು ಕೋಟಿ ಜನರಿಗೆ ಕೊಡಲು ಆಗಲ್ಲ. 28 ದಿನದ ನಂತರ ಎರಡನೇ ಡೋಸ್ ಪಡೆಯಬೇಕು. ಆದರೆ, ಈಗ ಮೂರು ತಿಂಗಳು ಮಾಡಿದ್ದಾರೆ. ಅಂತ್ಯಸಂಸ್ಕಾರಕ್ಕೆ 5 ಸಾವಿರ ವ್ಯವಸ್ಥೆ ಮಾಡಿದ್ದೆವು. ಇಂತಹ ವೇಳೆ ನಿಮಗೆ ಕೊಡೋಕೆ ಏನು ಕಷ್ಟ ಎಂದು ಕೇಳಿದರು.
ಆಕ್ಸಿಜನ್ ಕೊಡಿ ಎಂದು ಹೈಕೋರ್ಟ್ ಹೇಳಬೇಕಾಯ್ತು. ಇಲ್ಲವಾದರೆ ಆಕ್ಸಿಜನ್ ಸಿಗ್ತಿರಲಿಲ್ಲ. ಇವತ್ತು ಜಡ್ಜ್ ತೀರ್ಪನ್ನೇ ಪ್ರಶ್ನಿಸುತ್ತಿದ್ದಾರೆ. ಜಡ್ಜ್ಗಳನ್ನೇ ಪ್ರಶ್ನಿಸಿದರೆ ನ್ಯಾಯ ಎಲ್ಲಿ ಸಿಗಲಿದೆ. ರಾಜ್ಯದ ಬಿಜೆಪಿ ಸಂಸದರು ಜನರಿಂದ ಗೆದ್ದುಬಂದಿಲ್ಲ. ನಾವು ಮೋದಿಯಿಂದ ಗೆದ್ದು ಬಂದಿದ್ದೇವೆಂಬ ಅಭಿಪ್ರಾಯವಿದೆ. ಹಾಗಾಗಿ ಇವತ್ತು ಸಂಸದರು ಕೆಲಸ ಮಾಡ್ತಿಲ್ಲ. ಕೇಂದ್ರದಿಂದ ಯಾವ ನೆರವನ್ನೂ ತರುತ್ತಿಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ಖಾದರ್ ವಾಗ್ದಾಳಿ ನಡೆಸಿದರು.