ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣನವರು ಯಾವ ಪುರುಷಾರ್ಥಕ್ಕಾಗಿ ಭ್ರಷ್ಟ ಅಧಿಕಾರಿಯನ್ನು ಇಲಾಖೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.
ಬೆಂಗಳೂರು ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡವರನ್ನು ಹೊರಗೆ ಹಾಕಿದ್ದಾರೆ. ಅವರು ಕಾಂಗ್ರೆಸ್ ಪರ ಇದ್ದಾರೆ ಅಂತ ಅವರನ್ನು ಅಲ್ಲಿಂದ ಹೊರಗೆ ಹಾಕುವ ಕೆಲಸ ಮಾಡ್ತಿದ್ದಾರೆ. ನಾನು ವ್ಯಾಪಾರ ಮಾಡಲು ರಾಜಕಾರಣಕ್ಕೆ ಬರಲಿಲ್ಲ. ತಪ್ಪು ಇದ್ದರೆ ಸಾಬೀತು ಮಾಡಲಿ. ನಾನು ಸದನದಲ್ಲಿ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ ಎಂದ ಅವರು, ಸದನದಲ್ಲಿ ತಾವು ರಾಜೀನಾಮೆಗೂ ಬದ್ಧ ಎಂದಿದ್ದನ್ನು ಪುನರುಚ್ಛರಿಸಿದರು.
ಭಾಲ್ಕಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲವನ್ನು ತಾಂತ್ರಿಕ ಪ್ರಕ್ರಿಯೆಗಳ ಮೂಲಕವೇ ಮಾಡಲಾಗಿದೆ. ಇದನ್ನು ಮಂತ್ರಿಗಳು ತಿಳಿದುಕೊಳ್ಳಲಿ. ಯಾರಾದರೂ ಪ್ರಕ್ರಿಯೆ ಉಲ್ಲಂಘನೆ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ಕ್ಷುಲ್ಲಕ ಕಾರಣ ನೀಡಿ ಇಡೀ ರಾಜ್ಯದ ಬಡವರ ಕಂತಿನ ಹಣವನ್ನು ಸ್ಟಾಪ್ ಮಾಡಿ, ಬೆಂಗಳೂರಿನ ಗುತ್ತಿಗೆದಾರರಿಗೆ ಕೋಟಿ ಕೋಟಿ ಹಣ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಅನ್ನ, ವಸತಿ, ವಸ್ತ್ರ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿ. 2014ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ಬಂದಾಗ ಎಲ್ಲರಿಗೂ ವಸತಿ ಸೌಲಭ್ಯ ಕೊಡುತ್ತೇವೆ ಅಂತ ಹೇಳಿದ್ರು. ವಿ.ಸೋಮಣ್ಣ ಮಂತ್ರಿಯಾದ ಬಳಿಕ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ. ಸಸ್ಪೆಂಡ್ ಆಗಿರುವ ಅಧಿಕಾರಿ ಮಹಾದೇವ ಪ್ರಸಾದ್ ಅವರನ್ನು ಕೂರಿಸಿಕೊಂಡು ಕೆಲಸ ಮಾಡ್ತಿದ್ದಾರೆ. ಇವರಿಗೇನು ನೈತಿಕತೆ ಇದೆಯಾ?, ಮನೆ ಕಟ್ಟಿಕೊಳ್ಳುತ್ತಿರುವವರಿಗೆ ಬಿಲ್ ಬಿಡುಗಡೆ ಆಗುತ್ತಿಲ್ಲ. ಹದಿನೆಂಟು ತಿಂಗಳಿಂದ ಕಂತು ಬಿಡುಗಡೆ ಆಗುತ್ತಿಲ್ಲ. ಸೋಮಣ್ಣ ದುರುದ್ದೇಶದಿಂದ ಈ ಕೆಲಸ ಮಾಡುತ್ತಿದ್ದಾರೆ. ಬಾಲ್ಕಿಯಲ್ಲಿರುವ ಫಲಾನುಭವಿಗಳು ಒಂದು ಪಕ್ಷಕ್ಕೆ ಸಿಮೀತ ಆದವರಲ್ಲ. ಮಂತ್ರಿಗಳು ಮೊದಲು ಇದನ್ನು ತಿಳಿದುಕೊಳ್ಳ ಬೇಕು ಎಂದರು.
ಇನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮಾಜವನ್ನು ಸೇರಿಸಬೇಕು. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೊಡಲಿ. ಎಲ್ಲವನ್ನು ಅಧ್ಯಯನ ಮಾಡಿ ಮೀಸಲಾತಿ ನಿರ್ಧಾರ ಮಾಡಲಿ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ನೀಡಲಿ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಎಲ್ಲರಿಗೂ ಅನುಕೂಲ ಆಗುವ ರೀತಿಯಲ್ಲಿ ತೀರ್ಮಾನ ಮಾಡಲಿ, ಹಿಂದುಳಿದ ವರ್ಗಗಳ ಮೂರನೇ ಆಯೋಗ ಕೊಟ್ಟ ವರದಿಯಂತೆ ಮೀಸಲಾತಿ ನೀಡಲಿ ಎಂದರು.