ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಪಕ್ಷದ ಆಂತರಿಕ ವಿಚಾರ ನಮಗೆ ಬೇಡ. ಅವರ ಪಕ್ಷದ ವಿಚಾರ ಅವರೇ ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.
ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಅವರನ್ನು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಭೋಜನಕೂಟ ಇದೆ. ಸಿಎಂ ಬದಲಾವಣೆ ವಿಚಾರ ಅವರ ಪಕ್ಷದ ವಿಚಾರಗಳು. ಆ ಬಗ್ಗೆ ನಾವ್ಯಾಕೆ ಮಾತನಾಡಬೇಕು. ಅವರನ್ನು ಪ್ರಶಂಸಿಸಲು, ಅವರಿಗೆ ಸಲಹೆ ನೀಡಲು, ಅವರನ್ನು ತೆಗಳಲು ನಾವಿಲ್ಲ ಎಂದು ಉತ್ತರಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತರಿಗೆ ನೀಡುವ ಅನುದಾನ ಕಡಿತ, ದಲಿತರ ಯೋಜನೆಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಜನ ಹಾಗೂ ದಲಿತ ವಿರೋಧಿ ಪಕ್ಷ.
ದಲಿತರಿಗೆ, ಅವರ ಯೋಜನೆಗಳಿಗೆ ಸಿಗಬೇಕಾದ ಅನುದಾನವನ್ನು ತೆಗೆದು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ದಲಿತರು ತಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ. ಕೇವಲ ರಾಜಕಾರಣಕ್ಕೆ ಬಿಜೆಪಿ ದಲಿತರನ್ನು ಬಳಸಿಕೊಳ್ಳುತ್ತಿದೆ' ಎಂದು ಆರೋಪಿಸಿದರು.
ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಬಸವಶ್ರೀ ಪುರಸ್ಕಾರ ಪ್ರದಾನ; ಪತ್ನಿಯಿಂದ ಪ್ರಶಸ್ತಿ ಸ್ವೀಕಾರ