ಬೆಂಗಳೂರು: ಯೋಗ ಮತ್ತು ಮಲ್ಲಕಂಬ ಕೂಡ ಖೇಲೋ ಇಂಡಿಯಾ ಕ್ರೀಡೆಗೆ ಸೇರಿಸಲಾಗಿದ್ದು, ಗ್ರಾಮೀಣ ಆಟವನ್ನೂ ಕ್ರೀಡೆಗೆ ಸೇರಿಸಿ ಈ ಬಾರಿ ವಿಶ್ವದ ಗಮನ ಸೆಳೆದಿದ್ದೇವೆ. ಕ್ರೀಡಾ ಕೂಟ ಅಯೋಜನೆಗೆ ಜೈನ್ ವಿವಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಸಂಪೂರ್ಣವಾಗಿ ವಿವಿ ಶ್ರಮ ವಹಿಸಿದೆ. ಇದರ ಜೊತೆಯಲ್ಲಿ ಅತಿ ಹೆಚ್ಚು ಮೆಡಲ್ ಜೈನ್ ವಿವಿ ಪಡೆದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕಳೆದ 9 ದಿನಗಳಿಂದ ಖೇಲೋ ಇಂಡಿಯಾ ಕ್ರೀಡಾಕೂಟ ನಗರದಲ್ಲಿ ನಡೆಯಿತು. ಕ್ರೀಡಾಕೂಟದ ಸಮಾರೋಪ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ಜರುಗಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಆರಗ ಜ್ಞಾನೇಂದ್ರ, ನಟ ಸುದೀಪ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯವಾಗಿ 500 ವಿದ್ಯಾರ್ಥಿಗಳಿಂದ ʼಯೋಗ' ಪ್ರದರ್ಶನ ಮತ್ತು ʼಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್-2021ʼರ 500 ಸ್ಪರ್ಧಾಳುಗಳಿಂದ ʼಆಜಾದಿ ಕಾ ಅಮೃತ್ ಮಹೋತ್ಸವʼದ ನೃತ್ಯ ಮತ್ತು ಸಂಗೀತದ ಜೊತೆ ಬಹುವರ್ಣಗಳ ಲೇಸರ್ ಬೆಳಕಿನ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಖೇಲೋ ಇಂಡಿಯಾ 2021 ಪೋಸ್ಟಲ್ ಕವರ್ ಬಿಡುಗಡೆ ಮಾಡಲಾಯಿತು.
ಒಲಿಂಪಿಕ್ಗೆ ಹೋಗಲು ಭಾರತೀಯ ಕ್ರೀಡಾಪಟುಗಳ ಕೊರತೆ ಇತ್ತು: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಎರಡನೇಯ ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಮೂರು ಸಾವಿರ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಯೂನಿವರ್ಸಿಟಿ ಕ್ರೀಡಾಕೂಟಕ್ಕೆ ಇಷ್ಟು ಜನ ಕ್ರೀಡಾಪಟುಗಳು ಆಗಮಿಸಿರುವುದು ಸಂತಸ ತಂದಿದೆ. ಒಲಿಂಪಿಕ್ಗೆ ಹೋಗಲು ಭಾರತೀಯ ಕ್ರೀಡಾಪಟುಗಳ ಕೊರತೆ ಇತ್ತು. ಕ್ರಿಕೆಟ್ ಬಿಟ್ಟು ಎಲ್ಲಾ ಕ್ರೀಡೆಗಳಿಂದ ಹಿಂದೆ ಉಳಿದಿದ್ದೆವು. ಈಗ ಒಲಿಂಪಿಕ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗಿಯಾಗುವ ಅವಕಾಶ ಒದಗಿ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಮೋದಿಯಿಂದ ಕ್ರೀಡಾಕೂಟದ ಅಯೋಜನೆಗೆ ಸಾಕಷ್ಟು ಚರ್ಚೆ: ಮೋದಿ ಕ್ರೀಡಾಕೂಟಕ್ಕಾಗಿ ಸಾಕಷ್ಟು ಚರ್ಚೆ ಮಾಡಿದ್ದರು. ಎಲ್ಲಾ ಕ್ರೀಡಾ ಸಂಘಗಳ ಜೊತೆ ಕ್ರೀಡಾ ಸಚಿವರು ಮಾತುಕತೆ ನಡೆಸಿದ್ದರು. ಈಗ ಕ್ರೀಡಾಪಟುಗಳು ಎಲ್ಲಾ ಕ್ರೀಡೆಗಳಲ್ಲಿ ಭಾಗಿಯಾಗುವ ಮೂಲಕ ಭಾರತದ ಹೆಸರನ್ನ ಉತ್ತುಂಗಕ್ಕೆ ಏರಿಸಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ಸಫಲರಾಗಿದ್ದಾರೆ. ಜೀವನದ ಯಾವುದೇ ಕ್ಷೇತ್ರದಲ್ಲಿ ಇರಿ, ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿ ಎಂದು ಕರೆ ನೀಡಿದರು.
ಉತ್ತಮ ಕ್ರೀಡೆ ನೋಡಿ ಜೀವನದಲ್ಲಿ ಆನಂದ ದೊರೆಯುತ್ತದೆ: ಉತ್ತಮ ಕ್ರೀಡೆ ನೋಡಿ ಜೀವನದಲ್ಲಿ ಆನಂದ ದೊರೆಯುತ್ತದೆ. ಈಗ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗಿಯಾಗಿ ಗೆಲುವು ಪಡೆಯುವ ಕ್ಷಣ ಎದುರಾಗಿದೆ. 75ನೇ ವರ್ಷದ ಆಜಾದ್ ಕಿ ಅಮೃತ ಮಹೋತ್ಸವ ದಿನಮಾನದಲ್ಲಿ ಒಲಿಂಪಿಕ್ ಕ್ರೀಡೆಯಲ್ಲಿ ಭಾರತ 5ನೇ ಸ್ಥಾನದ ಒಳಗೆ ಬರಬೇಕು ಎನ್ನುವ ಆಶಯ ಇದೆ. ಈ ಕ್ರೀಡಾಕೂಟದಲ್ಲಿ ಒಟ್ಟು 208 ವಿವಿಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಒಡಿಶಾದಲ್ಲಿ ಮೊದಲ ಬಾರಿಗೆ ಖೇಲೋ ಇಂಡಿಯಾ ನಡೆದಾಗ 118 ವಿವಿಗಳು ಮಾತ್ರ ಭಾಗಿಯಾಗಿದ್ದವು ಎಂದರು.

ಪ್ರಧಾನಿ ಮೋದಿ ಪ್ರೇರಣೆ: ಪ್ರಧಾನಿ ಮೋದಿ ಪ್ರೇರಣೆಯ ಮೇಲೆ ಕ್ರೀಡೆ ಆಯೋಜಿಸಲಾಗಿದೆ. 80 ಕ್ರೀಡೆಗಳನ್ನ ಆಡಲು ಬೇರೆ ದೇಶಗಳೊಂದಿಗೆ ಟೈಅಪ್ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಈ ರೀತಿಯ ಕ್ರೀಡೆಗಳನ್ನು ಆಡುವ ಮೂಲಕ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲ್ಲಲು ಸಾಧ್ಯ ಎಂದರು.
ಸೋಲು ಎನ್ನುವುದನ್ನು ತಳ್ಳಿ ಹಾಕಬೇಕು: ಸೋಲು ಎನ್ನುವುದನ್ನು ತಳ್ಳಿ ಹಾಕಿ ಗೆಲುವಿನತ್ತ ಮನಸ್ಸು ಮಾಡಬೇಕು. ಕರ್ನಾಟಕ ಸರ್ಕಾರ 75 ಜನ ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡಿದೆ. ಎಲ್ಲ ರಾಜ್ಯ ಸರ್ಕಾರಗಳು ಕೂಡ ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಭಾರತ ಮುಂದೆ ಒಲಿಂಪಿಕ್ನಲ್ಲಿ ದೊಡ್ಡ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲುವು ಸಾಧಿಸುವ ಮೂಲಕ ಉನ್ನತ ಸ್ಥಾನಕ್ಕೆ ತಲುಪಿ: ಗೆಲುವು ಸಾಧಿಸುವ ಮೂಲಕ ಉನ್ನತ ಸ್ಥಾನಕ್ಕೆ ಹೋಗಬೇಕು. ಬೆವರು ಹರಿಸುವ ಮೂಲಕ ಎಲ್ಲರೂ ಕ್ರೀಡೆಯಲ್ಲಿ ಭಾಗಿಯಾಗಿದ್ದಾರೆ. ಒಲಿಂಪಿಕ್ ನಲ್ಲಿ ಭಾಗಿಯಾಗಿ ಚಿನ್ನ ಗೆದ್ದು ಬನ್ನಿ ಎಂದು ಕ್ರೀಡಾಪಟುಗಳಿಗೆ ಶಾ ಕರೆ ನೀಡಿದರು.

ಕಬಡ್ಡಿ ಮತ್ತು ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ: ಕರ್ನಾಟಕ ಸರ್ಕಾರ ಕಬ್ಬಡಿ ಮತ್ತು ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಕ್ರೀಡಾಳುಗಳಿಗೆ ಉಚಿತ ತರಬೇತಿ ನೀಡುವುದಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರದ ಘೋಷಣೆ ಬೇರೆ ರಾಜ್ಯಗಳಿಗೆ ಪ್ರೇರಣೆಯಾಗಬೇಕು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.
ಗುಜರಾತ್‌ನಲ್ಲಿ ಕ್ರೀಡಾ ಸೌಲಭ್ಯಗಳು ಹೆಚ್ಚು: ಗುಜರಾತ್‌ನಲ್ಲಿ ಕ್ರೀಡಾ ಸೌಲಭ್ಯಗಳು ಬಹು ಹೆಚ್ಚಾಗಿವೆ. ಇಂದು ಇಡೀ ದೇಶದಲ್ಲಿ ಕ್ರೀಡಾ ಸೌಲಭ್ಯ ಅಭಿವೃದ್ಧಿಯಾಗುತ್ತಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಅನೇಕರು ಭಾರತಕ್ಕಾಗಿ ಪದಕ ಗೆಲ್ಲಲಿದ್ದಾರೆ. ಭಾರತ ಎಂದಿಗೂ ಸರ್ವಶ್ರೇಷ್ಠವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
-
A glimpse of vibrant culture display at the closing ceremony of #KIUG2021#KheloIndia pic.twitter.com/RDaMy1EhUX
— Khelo India (@kheloindia) May 3, 2022 " class="align-text-top noRightClick twitterSection" data="
">A glimpse of vibrant culture display at the closing ceremony of #KIUG2021#KheloIndia pic.twitter.com/RDaMy1EhUX
— Khelo India (@kheloindia) May 3, 2022A glimpse of vibrant culture display at the closing ceremony of #KIUG2021#KheloIndia pic.twitter.com/RDaMy1EhUX
— Khelo India (@kheloindia) May 3, 2022
ಅತಿ ದೊಡ್ಡ ಸ್ಟೇಡಿಯಂ ಅಮಿತ್ ಶಾ ಸಂಕಲ್ಪ: ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಪ್ರಪಂಚದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಕಟ್ಟಬೇಕೆಂಬ ಸಂಕಲ್ಪವನ್ನು ಗೃಹ ಸಚಿವ ಅಮಿತ್ ಶಾ ಮಾಡಿದ್ದರು. ಅದರಂತೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟಿಸಿದರು ಎಂದರು.
ಖೇಲೋ ಇಂಡಿಯಾ ಗೇಮ್ಸ್ ಪ್ರಧಾನಿ ಮೋದಿ ಕನಸು: ಖೇಲೋ ಇಂಡಿಯಾ ಗೇಮ್ಸ್ ಪ್ರಧಾನಿ ಮೋದಿ ಕನಸು. ಕ್ರೀಡಾಕೂಟದ ಆಲೋಚನೆ 2016ರಿಂದ ಆರಂಭವಾಯಿತು. ಬೆಂಗಳೂರಿನಲ್ಲಿ ಆಯೋಜನೆ ಆಗಿರುವ ಖೇಲೋ ಇಂಡಿಯಾ ಯಶಸ್ವಿಯಾಗಿದೆ. ಮೂರು ಸಾವಿರ ಜನ ಭಾಗವಹಿಸಿದ್ದಾರೆ. 3 ಜನ ಒಲಿಂಪಿಕ್ ಕ್ರೀಡಾಪಟುಗಳು ಭಾಗಿಯಾಗಿದ್ದರು. ಎರಡು ನ್ಯಾಷನಲ್ ರೆಕಾರ್ಡ್ ಆಗಿದೆ. ಶಿವ ಶ್ರೀಧರ್ ಸ್ವಿಮ್ಮಿಂಗ್, ಅನ್ ಮೇರಿಯಾ ವೇಟ್ ಲಿಫ್ಟಿಂಗ್ ನಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಯೋಗ ಮಾಡಿದ ಯುವತಿಗೆ ಠಾಕೂರ್ ಅಭಿನಂದನೆ: ಯೋಗ ಕೂಡ ಕ್ರೀಡಾಕೂಟದಲ್ಲಿ ಅಳವಡಿಸಿದ್ದು, ಯೋಗದ ಶಕ್ತಿಯನ್ನು ಕೂಡ ನೋಡಿದೆವು. ಮೋದಿ ಕೂಡ ಯೋಗವನ್ನ ಉತ್ತೇಜಿಸುತ್ತಿದ್ದಾರೆ. ವಿಶ್ವಸಂಸ್ಥೆ ಕೂಡ ಯೋಗ ದಿನಾಚರಣೆ ಮಾಡಲು ಒಪ್ಪಿಗೆ ನೀಡಿದೆ. ಈಗ ಅದರ ಶಕ್ತಿ ನೋಡಿದೆವು ಎಂದು ಯೋಗ ಮಾಡಿದ ಯುವತಿಗೆ ಠಾಕೂರ್ ಧನ್ಯವಾದ ಅರ್ಪಿಸಿದರು.
ಕ್ರೀಡೆ ಮನುಷ್ಯನ ಸಹಜ ಕ್ರಿಯಾಶೀಲ ಚಟುವಟಿಕೆ: ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ ಕ್ರೀಡೆ ಮನುಷ್ಯನ ಸಹಜ ಕ್ರಿಯಾಶಿಲ ಚಟುವಟಿಕೆ. ಕ್ರೀಡೆಯಿಂದ ಶಿಸ್ತು ಬರುತ್ತದೆ, ಶಿಸ್ತಿನಿಂದ ವ್ಯಕ್ತಿತ್ವ ಬರುತ್ತದೆ. ಗೆಲ್ಲಬೇಕೆಂಬ ಸಕಾರಾತ್ಮಕತೆಯಿಂದ ಆಟ ಆಡಬೇಕು. ಆದರೆ ಸೋತಾಗ ಅದನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಪ್ರೋತ್ಸಾಹದಿಂದ ಅತಿ ಹೆಚ್ಚು ಮೆಡಲ್: ಯಾವ ಪ್ರಧಾನಿನೂ ಹೇಳದ ಮಾತನ್ನು ನರೇಂದ್ರ ಮೋದಿಜಿ ಹೇಳಿದ್ದಾರೆ. ಖೇಲೋ ಇಂಡಿಯಾ, ಜೀತೋ ಇಂಡಿಯಾ, ಫಿಟ್ ಇಂಡಿಯಾ ಎಂದಿದ್ದಾರೆ. ಈ ಮಾತುಗಳನ್ನು ಅಳವಡಿಸಿಕೊಂಡು ಬೀಜಿಂಗ್‌ನಲ್ಲಿ ಅತಿ ಹೆಚ್ಚು ಮೆಡಲ್ ಗೆಲ್ಲಲು ಸಾಧ್ಯವಾಯಿತು. ಮೋದಿಯವರ ಕನಸಿನಿಂದ ಗುಜರಾತ್‌ನಲ್ಲಿ ಕ್ರೀಡಾ ನಗರಿ ನಿರ್ಮಾಣವಾಗುತ್ತಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಎಲ್ಲ ವಿಧ್ಯಾರ್ಥಿಗಳಿಗೆ 4 ವರ್ಷ ಉಚಿತ ತರಬೇತಿ ನೀಡುತ್ತಿದ್ದೇವೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಕನಿಷ್ಠ 10 ಜನರಾದರೂ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇತಿಹಾಸ ನಿರ್ಮಿಸುವ ತಾಖತ್ತು ಯುವಕರಿಗೆ ಮಾತ್ರ: ಮೋದಿಯವರು ಹೇಳಿದಂತೆ ರಾಜ್ಯದಿಂದ ಕಬ್ಬಡಿ ಮತ್ತು ಬ್ಯಾಸ್ಕೆಟ್‌ಬಾಲ್ ಗೇಮ್ಸ್‌ಗೆ ಪ್ರೋತ್ಸಾಹ ನೀಡಲಾಗುವುದು. ಇಂದು ಭಾರತದೆಲ್ಲೆಡೆ ಬೆಂಗಳೂರಿನ ಯೂನಿವರ್ಸಿಟಿಗಳು ಹೆಸರು ಮಾಡಿವೆ. ಗೆದ್ದವರೆಲ್ಲರಿಗೂ ಅಭಿನಂದನೆಗಳು. ಈ ಶತಮಾನದಲ್ಲಿ ಏನಾದರೂ ಇತಿಹಾಸ ನಿರ್ಮಿಸುವ ತಾಖತ್ತಿದ್ದರೆ ಅದು ಯುವಕರಿಗೆ ಮಾತ್ರ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ನವದೆಹಲಿಗೆ ವಾಪಸ್ಸಾದ ಕೇಂದ್ರ ಗೃಹ ಸಚಿವ ಅಮಿತ್ ಶಾ