ಬೆಂಗಳೂರು: ಜನಸಾಮಾನ್ಯರಿಗೆ ಅತಿ ಸನಿಹವಾದ ಹೊಣೆಯನ್ನು ಆಕಾಶವಾಣಿ ನಿರ್ವಹಿಸುತ್ತಿದೆ. ನುಡಿ, ಕಲೆ, ಸಂಸ್ಕೃತಿ, ಸಂಗೀತ ಪರಂಪರೆಯನ್ನು ಪ್ರತಿಬಿಂಬಿಸಬೇಕಿದ್ದ ಆಕಾಶವಾಣಿಯ ಅಮೃತವರ್ಷಿಣಿ ಎಫ್ಎಂ ಚಾನಲ್ (100.10 ಎಫ್ ಎಂ) ಅನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿ ದೊಡ್ಡ ತಪ್ಪು ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಾಡೋಜ ಡಾ.ಮಹೇಶ ಜೋಶಿ, ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತದ ಪ್ರಸಾರಕ್ಕಾಗಿಯೇ ಮೀಸಲಾಗಿದ್ದ ಈ ಅಮೃತವರ್ಷಿಣಿ ಎಫ್ಎಂ ಚಾನಲ್ ಪ್ರಸಾರವನ್ನು ಸ್ಥಗಿತಗೊಳಿಸಿ, ಅದರ ಬದಲಾಗಿ ತೆಲುಗು ಭಾಷೆಯ ʻರಾಗಂʼ ಚಾನಲ್ ಆರಂಭಿಸಲಾಗಿದೆ. ಅಮೃತವರ್ಷಿಣಿಯು ನಮ್ಮ ನಾಡಿನ ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತ ಕಲಾವಿದರಿಗೆ ಉತ್ತಮ ಅವಕಾಶ ನೀಡುತ್ತಿತ್ತು. ಅಲ್ಲದೇ ಶಾಸ್ತ್ರೀಯ ಸಂಗೀತ ಪರಂಪರೆಗೆ ಉತ್ತೇಜನ ನೀಡುತ್ತಿತ್ತು.
ಈ ಬಾನುಲಿಯು ಕೇಳುಗರಿಗೆ, ಶಾಸ್ತ್ರೀಯ ಸಂಗೀತ ಅಭ್ಯಾಸಿಗಳಿಗೆ ಆಪ್ಯಾಯಮಾನವಾಗಿತ್ತು. ಎರಡು ದಶಕಗಳಿಂದ ದಿನವಿಡೀ ಶಾಸ್ತ್ರೀಯ ಸಂಗೀತ ಪ್ರಸಾರವಾಗುತ್ತ ಹೃನ್ಮನಗಳನ್ನು ತಣಿಸುತ್ತಿತ್ತು. ಸರಿಸುಮಾರು ನಮ್ಮ ರಾಜ್ಯದ 3000 ಕ್ಕೂ ಹೆಚ್ಚು ಕಲಾವಿದರು ಅಮೃತವರ್ಷಿಣಿ ಮೂಲಕ ಸಂಗೀತ ಕಛೇರಿ ನೀಡಿದ್ದರು. ಈ ಚಾನಲ್ ಅನ್ನು ಸ್ಥಗಿತಗೊಳಿಸಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ 142 ಕೋಟಿ ರೂ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ