ಬೆಂಗಳೂರು : ಚಿತ್ರರಂಗದ ಪ್ರತಿಭಾವಂತ ನಟ, ಬಹುಮುಖ ಪ್ರತಿಭೆ, ತಮ್ಮ ಇಡೀ ಬದುಕನ್ನು ಕನ್ನಡ ಸಿನಿಮಾಕ್ಕೆ ಮೀಸಲಿಟ್ಟು, ಈಚೆಗೆ ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' (Karnataka Ratna) ಪ್ರಶಸ್ತಿ ಘೋಷಣೆ ಮಾಡಿರುವುದು ಅರ್ಥಪೂರ್ಣ ಹಾಗೂ ನಿಜವಾದ ಗೌರವ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಈ ಮೊದಲೇ ಹೇಳಿದಂತೆ "ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಅವರ ಸ್ಫೂರ್ತಿ ಎಂದೆಂದಿಗೂ ನಮ್ಮೊಂದಿಗೆ ಇರುತ್ತದೆ" ಎಂದಿದ್ದಾರೆ.
ನಳಿನ್‍ಕುಮಾರ್ ಕಟೀಲ್ ಅಭಿನಂದನೆ:
ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಶ್ಲಾಘಿಸಿದ್ದಾರೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಎನಿಸಿದ್ದ ಪುನೀತ್ ಅವರು, ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು. ಕೇವಲ ಸಿನಿಮಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸದ ಪುನೀತ್ ಅವರು ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ನೆನಪಿಸಿದ್ದಾರೆ.
ಅಭಿಮಾನಿಗಳ ಒತ್ತಾಸೆಯಂತೆ ಕರ್ನಾಟಕ ಪ್ರಶಸ್ತಿ : ಸಚಿವ ನಿರಾಣಿ ಅಭಿನಂದನೆ
ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna For Puneeth Rajkumar) ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅತೀ ಚಿಕ್ಕವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟನೆಗೆ 'ರಾಷ್ಟ್ರೀಯ ಪ್ರಶಸ್ತಿಗೆ' ಭಾಜನರಾಗಿದ್ದ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಅಗಲಿದ ಮೇರು ನಟನೆಗೆ ಸಿಎಂ ಅವರು ಅರ್ಹ ಗೌರವವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂಬುದು ಅಭಿಮಾನಿಗಳು ಸೇರಿದಂತೆ ಆರುವರೆ ಕೋಟಿ ಕನ್ನಡಿಗರ ಒತ್ತಾಸೆಯಾಗಿತ್ತು. ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಅವರು, ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
(ಸ್ಯಾಂಡಲ್ವುಡ್ ಯುವರತ್ನ ಪುನೀತ್ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ)