ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, 25 ಕ್ಷೇತ್ರಗಳಿಂದ ಒಟ್ಟು 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯದ 25 ಸ್ಥಾನಗಳಿಗೆ ನಡೆಯಲಿರುವ ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿತ್ತು. ಹೀಗಾಗಿ ಸ್ಪರ್ಧೆಗಿಳಿದಿದ್ದ ಅಭ್ಯರ್ಥಿಗಳು ಇಂದು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ. ನವೆಂಬರ್ 26ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ.
ಅಂತಿಮ ದಿನವಾದ ಇಂದು 215 ನಾಮಪತ್ರ ಸ್ವೀಕರಿಸಲಾಗಿದೆ. ಒಟ್ಟು 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 119 ಪುರುಷರು ಹಾಗೂ ಇಬ್ಬರು ಮಹಿಳೆಯರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಿಂದ ಒಟ್ಟು 57 ನಾಮಪತ್ರ ಸಲ್ಲಿಕೆಯಾಗಿದ್ದರೆ, ಕಾಂಗ್ರೆಸ್ನಿಂದ 56, ಜನತಾದಳದಿಂದ 17 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಇತರೆ ಪಕ್ಷದ ಅಭ್ಯರ್ಥಿಗಳಿಂದ 17 ಹಾಗೂ ಪಕ್ಷೇತರರಿಂದ 68 ನಾಮಪತ್ರ ಸಲ್ಲಿಕೆ ಆಗಿವೆ.
ಕ್ಷೇತ್ರವಾರು ಕಣಕ್ಕಿಳಿದ ಅಭ್ಯರ್ಥಿಗಳು ಎಷ್ಟು?:
ಬೀದರ್‌ನಲ್ಲಿ 3 ಅಭ್ಯರ್ಥಿಗಳು, ಕಲಬುರಗಿಯಲ್ಲಿ 3, ಬೆಳಗಾವಿಯಲ್ಲಿ 10, ಉ.ಕನ್ನಡ 6, ಧಾರವಾಡದಲ್ಲಿ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜಾಪುರದಲ್ಲಿ 13, ಚಿಕ್ಕಮಗಳೂರು 6, ಹಾಸನದಲ್ಲಿ 4 ಅಭ್ಯರ್ಥಿಗಳು, ರಾಯಚೂರಲ್ಲಿ 5, ಬಳ್ಳಾರಿಯಲ್ಲಿ 8, ಚಿತ್ರದುರ್ಗ 4, ಶಿವಮೊಗ್ಗ 6, ದ.ಕನ್ನಡದಲ್ಲಿ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ತುಮಕೂರಲ್ಲಿ 7, ಮಂಡ್ಯದಲ್ಲಿ 4, ಬೆಂಗಳೂರು 4, ಬೆಂಗಳೂರು ಗ್ರಾಮಾಂತರ 3, ಕೋಲಾರ 4, ಕೊಡಗು 3, ಮೈಸೂರು 8 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಡಿಸೆಂಬರ್ 10 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.