ಬೆಂಗಳೂರು: ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಅಥವಾ ನಿರ್ಬಂಧ ವಿಧಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.
ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಇಂದಿನಿಂದ ರಾಜ್ಯದಲ್ಲಿ ನೂತನ ಮಾರ್ಗಸೂಚಿ ಜಾರಿಗೆ ಬಂದಿದ್ದು, ಅದರಲ್ಲಿ ಮುಂದಿನ ಎರಡು ವಾರಗಳಿಗೆ ಅನ್ವಯವಾಗುವಂತೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ವೇಳೆ ಅಗತ್ಯ ವಸ್ತುಗಳು ಮತ್ತು ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕಾ, ಬೇಡವಾ ಎನ್ನುವುದು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟದ್ದಾಗಿದೆ. ಆಯಾ ಜಿಲ್ಲಾಡಳಿತಗಳು ಮದ್ಯದಂಗಡಿಗಳನ್ನು ವೀಕೆಂಡ್ ಕರ್ಫ್ಯೂ ವೇಳೆ ತೆರೆಯಲು ಅನುಮತಿ ನೀಡಬಹುದು. ಹಾಗೆಯೇ ನಿರ್ಬಂಧಿಸಲೂಬಹುದು ಎಂದು ಆದೇಶದಲ್ಲಿ ಸ್ಪಷ್ಪಪಡಿಸಲಾಗಿದೆ.
ನೂತನ ಮಾರ್ಗಸೂಚಿ ಅನುಷ್ಠಾನಗೊಳಿಸುವಾಗ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಸನ್ನದು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಆದೇಶವನ್ನು ಹೊರಡಿಸಬೇಕು. ಮತ್ತು ಈ ಆದೇಶವನ್ನೇ ಪಾಲಿಸಬೇಕು ಎಂದು ರಾಜ್ಯದ ಎಲ್ಲಾ ಅಬಕಾರಿ ಸನ್ನದುದಾರರಿಗೆ ಅಬಕಾರಿ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
(ಇದನ್ನೂ ಓದಿ: ಬೆಂಗಳೂರಿನ ಒಂದೇ ಠಾಣೆಯ 14 ಪೊಲೀಸರಿಗೆ ಕೋವಿಡ್)