ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಗದ್ದಲದ ಹಿಂದೆ ಸಿಎಫ್‌ಐ, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸೇರಿದಂತೆ ಮುಸ್ಲಿಂ ಸಂಘಟನೆಗಳ ಪಾತ್ರವಿದೆ. ಈ ಕುರಿತು ಪ್ರಕರಣದಲ್ಲಿ ತಮ್ಮ ವಾದವನ್ನೂ ಆಲಿಸಬೇಕೆಂದು ಕೋರಿ ವಕೀಲರೊಬ್ಬರು ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮೂಲ ಅರ್ಜಿಯಲ್ಲಿ ತಮ್ಮ ವಾದವನ್ನೂ ಪರಿಗಣಿಸುವಂತೆ ಕೋರಿ ವಕೀಲ ಎನ್.ಪಿ ಅಮೃತೇಶ್ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಉಡುಪಿಯ ಒಂದೆರಡು ಕಾಲೇಜುಗಳಲ್ಲಿ ಆರಂಭವಾದ ವಸ್ತ್ರ ಸಂಹಿತೆ ವಿವಾದ ಇದೀಗ ರಾಜ್ಯಮಟ್ಟದಲ್ಲಿ ವ್ಯಾಪಿಸಿದೆ. ಶಿವಮೊಗ್ಗ, ಬೆಂಗಳೂರು, ಧಾರವಾಡ, ಬೆಳಗಾವಿ, ಮಂಡ್ಯ, ಬಿಜಾಪುರ, ರಾಯಚೂರು, ಬಾಗಲಕೋಟೆ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವಿದ್ಯಾರ್ಥಿ ಸಮುದಾಯದ ನಡುವೆ ಬಿರುಕು ಮೂಡಿಸಿದೆ. ಹಿಜಾಬ್ ನಿರ್ಬಂಧ ವಿಚಾರದಲ್ಲಿ ಮುಸ್ಲಿಂ ಯುವ ಸಮದಾಯವನ್ನು ಕೆಲವು ಸಂಘಟನೆಗಳು ಹಾದಿ ತಪ್ಪಿಸುತ್ತಿವೆ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ಹೊರಡಿಸಿದ ನಿರ್ದಿಷ್ಟ ಅಧಿಸೂಚನೆ ನಂತರವೇ ಸಮಸ್ಯೆ ಸೃಷ್ಟಿಯಾಗಿದೆ.
ಸುತ್ತೋಲೆಯ ಅನಗತ್ಯ ಲಾಭವನ್ನು ಪಡೆದುಕೊಂಡು ಕೆಲವು ಅತೃಪ್ತ ಸಂಘಟನೆಯ ಮುಖ್ಯಸ್ಥರು ಇಡೀ ಶಿಕ್ಷಣ ಕ್ಷೇತ್ರಕ್ಕೆ ತೊಂದರೆ ನೀಡಲು ಪ್ರಾರಂಭಿಸಿದ್ದಾರೆ. ಸರ್ಕಾರದ ಸುತ್ತೋಲೆಯ ವಿರುದ್ಧ ಯಾರೂ ಧ್ವನಿ ಎತ್ತಿರಲಿಲ್ಲ. ಆದರೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ), ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತಿತರೆ ಸಂಘಟನೆಗಳು ನೇರವಾಗಿ ತೊಡಗಿಸಿಕೊಂಡಿವೆ.
ಇದನ್ನೂ ಓದಿರಿ: ಭಾರತದ ರೈತರ ಮನಸ್ಸು ಗೆದ್ದಿದ್ದೇನೆ, ದೇಶದ ಹಿತಕ್ಕಾಗಿ ಕೃಷಿ ಕಾನೂನು ಹಿಂಪಡೆದೆ: ಪ್ರಧಾನಿ ಮೋದಿ
ಈ ಸಂಘಟನೆಗಳು ಮೂಲ ಉದ್ದೇಶವೇ ಶಿಕ್ಷಣ ಸಂಸ್ಥೆಗಳ ವಾತಾವರಣ ಕೆಡಿಸುವುದಾಗಿದೆ. ವಿಶೇಷವಾಗಿ ಕರ್ನಾಟಕ ರಾಜ್ಯದ ಶಾಂತಿಯುತ ಸಮಾಜವನ್ನು ಕದಡುವುದು ಅವರ ಏಕೈಕ ಉದ್ದೇಶವಾಗಿದೆ. ಮೇಲೆ ಹೇಳಿದ ಸಂಘಟನೆಗಳು ನೇರವಾಗಿ ಮುಗ್ಧ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿವೆ ಮತ್ತು ಅವರ ಯುವ ಧ್ವನಿಯನ್ನು ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಬಳಸುತ್ತಿವೆ ಎಂದು ಮಧ್ಯಂತರ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಕುರಿತಂತೆ ತಾವು ಪ್ರಸ್ತುತ ಪರಿಸ್ಥಿತಿಯ ಸತ್ಯಗಳನ್ನು ಪ್ರಸ್ತುತಪಡಿಸಲು ಸಿದ್ದವಿದ್ದು, ತಮ್ಮ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ವಕೀಲ ಎನ್.ಪಿ ಅಮೃತೇಶ್ ಕೋರಿದ್ದಾರೆ.