ಬೆಂಗಳೂರು: ವಿಲೇವಾರಿಯಾಗಿದೆ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳು ಹಾಗೂ ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯ ಹೈಕೋರ್ಟ್ 2021ನೇ ವರ್ಷದಲ್ಲಿ ದೇಶದಲ್ಲೇ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ.
ವರ್ಚುಯಲ್ ವ್ಯವಸ್ಥೆ ಮೂಲಕವೇ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ರಾಜ್ಯದ ಉಚ್ಚ ನ್ಯಾಯಾಲಯ ಹಲವು ಗಮನಾರ್ಹ ಮತ್ತು ಮಹತ್ವದ ತೀರ್ಪುಗಳನ್ನೂ ನೀಡಿದೆ. 2021ರಲ್ಲಿ ರಾಜ್ಯ ಹೈಕೋರ್ಟ್ ನೀಡಿದ ಪ್ರಮುಖ ತೀರ್ಪುಗಳ ಸಂಕ್ಷಿಪ್ತ ವರದಿ ಇಲ್ಲಿದೆ.
- ಬಾಲ ಸನ್ಯಾಸಕ್ಕೆ ಕಾನೂನು ಅಡ್ಡಿಯಿಲ್ಲ: ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ 16 ವರ್ಷದ ಬಾಲಕ ಅನಿರುದ್ಧ ಸರಳತ್ತಾಯ (ವೇದವರ್ಧನ ತೀರ್ಥ) ಅವರನ್ನು ಪೀಠಾಧಿಪತಿಯಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮಠದ ಭಕ್ತ ಸಮಿತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರಶರ್ಮ ನೇತೃತ್ವದ ವಿಭಾಗೀಯ ಪೀಠ, ಬೌದ್ಧ, ಜೈನ ಧರ್ಮಗಳಲ್ಲಿಯೂ ಬಾಲಕರನ್ನು ಭಿಕ್ಕುಗಳಾಗಿ, ಸನ್ಯಾಸಿಗಳಾಗಿ ನೇಮಕ ಮಾಡುವ ಪದ್ದತಿ ಇದೆ. ಹಿಂದೂ ಧರ್ಮದಲ್ಲಿ ವೇದಗಳು ಕೂಡ ಬಾಲಸನ್ಯಾಸವನ್ನು ಸಮ್ಮತಿಸಿವೆ. ಮುಖ್ಯವಾಗಿ ಬಾಲಕರನ್ನು ಸನ್ಯಾಸಿಯಾಗಿ ನೇಮಕ ಮಾಡದಂತೆ ನಿರ್ಬಂಧಿಸುವ ಯಾವುದೇ ಕಾನೂನು ಅಸ್ಥಿತ್ವದಲ್ಲಿಲ್ಲ ಎಂದು ತೀರ್ಪು ನೀಡಿತು.
- ತೃತೀಯ ಲಿಂಗಿಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲು: ಮೀಸಲು ಪೊಲೀಸ್ ಪಡೆ ನೇಮಕಾತಿಯಲ್ಲಿ ತಮಗೆ ಅವಕಾಶ ನೀಡಿಲ್ಲ ಎಂದು ತೃತೀಯ ಲಿಂಗಿಗಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಸರ್ಕಾರ ರಾಜ್ಯ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ ನಿಯಮಗಳು-1977ಕ್ಕೆ ತಿದ್ದುಪಡಿ ತಂದು ತೃತೀಯ ಲಿಂಗಿಗಳಿಗೆ ಎಲ್ಲಾ ಪ್ರವರ್ಗಗಳಲ್ಲಿಯೂ ಶೇಕಡಾ 1ರಷ್ಟು ಸಮತಲ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಿತು. ತೃತೀಯ ಲಿಂಗಿಗಳ ಪಾಲಿಗಿದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ತೀರ್ಪು ಎನ್ನಬಹುದು.
- ಕೋವಿಡ್ ಪ್ರಕರಣಗಳಲ್ಲಿ ನಿರ್ದೇಶನಗಳು: ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ನೀಡಿದ ನೂರಕ್ಕೂ ಹೆಚ್ಚು ನಿರ್ದೇಶನಗಳು ಮಹತ್ವದ ಸೋಂಕು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದವು. ಕಡ್ಡಾಯ ಮಾಸ್ಕ್ ಬಳಕೆಗೆ ನಿರ್ದೇಶನ, ಪೊಲೀಸರು, ದಾದಿಯರು, ವೈದ್ಯರಂತಹ ಮುಂಚೂಣಿ ಕೋವಿಡ್ ವಾರಿಯರ್ಸ್ಗೆ ಲಸಿಕೆ ನೀಡಲು ನಿರ್ದೇಶನ, ಚಾಮರಾಜನಗರ ದುರಂತದಲ್ಲಿ ರೋಗಿಗಳು ಸಾವನ್ನಪ್ಪಿದ ಘಟನೆಯ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡರ ನೇತೃತ್ವದ ಸಮಿತಿ ರಚನೆ, ಮೃತ ರೋಗಿಗಳ ಕುಟುಂಬದವರಿಗೆ 5 ಲಕ್ಷ ಪರಿಹಾರ ನೀಡಲು ನಿರ್ದೇಶನ, ಚಾಮರಾಜನಗರ ದುರ್ಘಟನೆ ಬಳಿಕ ಅಗತ್ಯ ಪ್ರಮಾಣದಲ್ಲಿ ಆ್ಯಕ್ಸಿಜನ್, ವ್ಯಾಕ್ಸಿನ್ ಪೂರೈಸಲೇಬೇಕು ಎಂದು ನೀಡಿದ ಕಟ್ಟುನಿಟ್ಟಿನ ನಿರ್ದೇಶನ ಸೇರಿದಂತೆ ಕೋವಿಡ್ ನಿರ್ವಹಣೆಯಲ್ಲಿ ನ್ಯಾಯಾಲಯದ ಆದೇಶಗಳು ಗಮನಾರ್ಹ.
- ಬಾಬಾಬುಡನ್ ಗಿರಿ ಪೂಜಾ ಕೈಂಕರ್ಯ ವಿವಾದ ಇತ್ಯರ್ಥ: ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸುವ ಕುರಿತು ಉದ್ಭವಿಸಿದ್ದ ವಿವಾದವನ್ನು ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ಧ ಪೀಠ ಇತ್ಯರ್ಥಪಡಿಸಿತು. ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಸ್ಲಿಂ ಧರ್ಮಗುರು ನೇಮಕ ಮಾಡಿ ಸರ್ಕಾರ 2018ರ ಮಾರ್ಚ್ 19ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿತು. ಕೋಮು ಸೌಹಾರ್ದತೆಗೆ ಮುಳ್ಳಿನಂತಾಗಿದ್ದ ಸರ್ಕಾರದ ಆದೇಶ ರದ್ದುಪಡಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿತು. ಇದರಿಂದಾಗಿ ಒಲ್ಲದ ಮನಸ್ಸಿನಲ್ಲಿ ಹಿಂದೂ ದೇವಾಲಯದಲ್ಲಿ ದೀಪ ಹಚ್ಚಿ ಬೆಳಗುವ ಕೆಲಸದಿಂದ ಮೌಲ್ವಿಗೆ ಮುಕ್ತಿ ಸಿಕ್ಕಿತಲ್ಲದೇ, ಹಿಂದೂಗಳಿಗೆ ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸುವ ಹಕ್ಕು ಲಭ್ಯವಾಯಿತು.
- ಕೊಡವರಿಗೆ ಲೈಸೆನ್ಸ್ ಇಲ್ಲದೇ ಶಸ್ತ್ರಾಸ್ತ್ರ ಹೊಂದುವ ಹಕ್ಕು: ಶಸ್ತ್ರಾಸ್ತ್ರ ಕಾಯ್ದೆ-1959ರ ಅಡಿ ಪಿಸ್ತೂಲ್, ಬಂದೂಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳುವುದರಿಂದ ಕೊಡವರಿಗೆ ವಿನಾಯ್ತಿ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸುವ ಮೂಲಕ ಕೊಡವರಿಗೆ ಇದ್ದ ವಿಶೇಷ ವಿನಾಯ್ತಿಯನ್ನು ಎತ್ತಿ ಹಿಡಿಯಿತು. ಜಮ್ಮಾ ಹಿಡುವಳಿದಾರರು ಹಾಗೂ ಕೊಡವರು ಸ್ವಾತಂತ್ರ್ಯ ಪೂರ್ವದಿಂದಲೂ ಈ ವಿನಾಯ್ತಿಯನ್ನು ಷರತ್ತುಗಳ ಮೇರೆಗೆ ಹೊಂದಿದ್ದಾರೆ. ಆದ್ದರಿಂದ ಅವರಿಗೆ ನೀಡಿರುವ ವಿನಾಯ್ತಿಯೂ ಸೂಕ್ತವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.
- ಎಸ್ಎಸ್ಎಲ್ ಸಿ ಪರೀಕ್ಷೆಗೆ ಅಸ್ತು: ಕೋವಿಡ್ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ನಗರದ ಶೈಕ್ಷಣಿಕ ಸಂಸ್ಥೆಯ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಪರೀಕ್ಷೆಗಳನ್ನು ಕೋವಿಡ್ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿತು. ಪಿಯು ವಿದ್ಯಾರ್ಥಿಗಳನ್ನು ಪಾಸು ಮಾಡಿದಂತೆಯೇ ತಮ್ಮನ್ನೂ ಪಾಸು ಮಾಡುವಂತೆ ವಿದ್ಯಾರ್ಥಿಗಳ ಪರ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ ಕೋವಿಡ್ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಶಿಕ್ಷಕರು ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಟ್ರಸ್ಟ್ ವಾದಿಸಿತ್ತು.
- ಕಾವೇರಿ ಕೂಗು ದೇಣಿಗೆ ಸಂಗ್ರಹಕ್ಕೆ ಸಮ್ಮತಿ : ಈಶ ಫೌಂಡೇಶನ್ ಕಾವೇರಿ ನದಿ ಪುನಶ್ಚೇತನಗೊಳಿಸುವ ಭಾಗವಾಗಿ ಹಮ್ಮಿಕೊಂಡಿದ್ದ ಕಾವೇರಿ ಕೂಗು ಅಭಿಯಾನದ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುವದನ್ನು ಪ್ರಶ್ನಿಸಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮೊದಲಿಗೆ ಹಣ ಸಂಗ್ರಹ ಹಾಗೂ ಯೋಜನೆಗೆ ಸಂಬಂಧಿಸಿದಂತೆ ಈಶ ಫೌಂಡೇಶನ್ ಹಾಗೂ ಸರ್ಕಾರದಿಂದ ಹಲವು ಮಾಹಿತಿ ಕೇಳಿತ್ತು. ಅಂತಿಮವಾಗಿ ಅರಣ್ಯೀಕರಣ ಮಹತ್ವದ ಹಿನ್ನೆಲೆಯಲ್ಲಿ ಸಿಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿತ್ತು.
- ಫ್ಲಿಪ್ ಕಾರ್ಟ್-ಅಮೆಜಾನ್ ವಿರುದ್ಧದ ತನಿಖೆಗೆ ಸಮ್ಮತಿ: ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಇ-ಕಾಮರ್ಸ್ ದೈತ್ಯ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ವಿರುದ್ಧ ತನಿಖೆ ನಡೆಸುವುದನ್ನು ಪ್ರಶ್ನಿಸಿ ಈ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ಧ ಪೀಠ ವಜಾಗೊಳಿಸಿತು. ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಸರಕುಗಳನ್ನು ಮಾರಾಟ ಮಾಡುವ ಮೂಲಕ ಸ್ಪರ್ಧಾ ಕಾಯ್ಗೆಯ ನಿಯಮಗಳನ್ನು ಈ ಸಂಸ್ಥೆಗಳು ಗಾಳಿಗೆ ತೂರಿವೆ ಎಂದು ಆರೋಪಿಸಿ ದೆಹಲಿ ವ್ಯಾಪಾರಸ್ಥರ ಸಂಘ ಸಲ್ಲಿಸಿದ್ದ ದೂರಿನ ಮೇರೆಗೆ ಸಿಸಿಐ ಅಮೆಜಾನ್-ಫ್ಲಿಪ್ ಕಾರ್ಟ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಗಳು ಅರ್ಜಿ ಸಲ್ಲಿಸಿದಾಗ, ಲೋಪ ಎಸಗಿಲ್ಲದಿದ್ದರೆ ತನಿಖೆಗೆ ಹೆದರುವುದೇಕೆ? ಎಂದು ಪ್ರಶ್ನಿಸಿದ್ದ ಪೀಠ, ತನಿಖೆ ಎದುರಿಸುವಂತೆ ಸೂಚಿಸಿತ್ತು.
- ಹೊನ್ನಾವರ ಬಂದರು ಅಭಿವೃದ್ಧಿ ಪ್ರಶ್ನಿಸಿದ್ದ ಅರ್ಜಿ ವಜಾ: ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಹೊನ್ನಾವರ ಬಂದರು ವಿಸ್ತರಣೆ ಅಭಿವೃದ್ಧಿ ಕಾಮಗಾರಿ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು.
- ಮಲತಾಯಿ ಮಡಿಲಿಗೆ ಮಗು ಒಪ್ಪಿಸಲಾಗದು: ತಾನು ಆರ್ಥಿಕವಾಗಿ ಸಿರಿವಂತನಿದ್ದು, ಮಗುವನ್ನು ತಾಯಿ ಬದಲಿಗೆ ನನ್ನೊಂದಿಗೆ ಇರಿಸಿಕೊಳ್ಳಲು ಆದೇಶ ನೀಡಬೇಕು ಎಂದು ಕೋರಿದ್ದ ತಂದೆಗೆ 50 ಸಾವಿರ ದಂಡ ವಿಧಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ಧ ಪೀಠ, ಮುಸ್ಲಿಂ ದಂಪತಿ ಬೇರೆಯಾದಾಗ ಮಲತಾಯಿ ಮಡಿಲಿಗೆ ಮಗು ಒಪ್ಪಿಸುವುದು ಸರ್ವತಾ ಸರಿಯಲ್ಲ. ತಾಯಿಯೊಂದಿಗೇ ಮಗು ಬೆಳೆಯಬೇಕು ಮತ್ತು ಮಗು ಅಲ್ಲಿಯೇ ಹೆಚ್ಚು ಸುರಕ್ಷಿತ ಭಾವ ಹೊಂದಿರುತ್ತದೆ ಎಂದು ಆದೇಶ ನೀಡಿತು.
- ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆದೇಶ: ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮುಗಿದರೂ ಚುನಾವಣೆ ನಡೆಸದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಜೆ ನೇತೃತ್ವದ ವಿಭಾಗೀಯ ಪೀಠ, ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸಲು ಆದೇಶ ನೀಡಿತು. ಕೋವಿಡ್ ಕಾರಣವನ್ನೇ ಮುಂದಿಟ್ಟುಕೊಂಡು ಹುಬ್ಬಳ್ಳಿ-ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಆಡಳಿತಾವಧಿ ಪೂರ್ಣಗೊಂಡ ನಂತರವೂ ಚುನಾವಣೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ-ಸಂಸದರ ಚುನಾವಣೆಗಳಿಗೆ ಇಲ್ಲದ ಕೋವಿಡ್ ಸಮಸ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಡ್ಡಿ ಮಾಡುತ್ತಿದೆಯೇ ಎಂದು ಸರ್ಕಾರಕ್ಕೆ ಚಾಟಿ ಬೀಸಿತಲ್ಲದೇ, ಸ್ಥಳೀಯ ಸಂಸ್ಥೆಗಳಿಗೆ ಇದೇ ಡಿ.30ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿದೆ. ಅಲ್ಲದೇ, ಒಕ್ಕಲಿಗರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
- ಗರ್ಭಧಾರಣೆ ಮಹಿಳೆಯ ಹಕ್ಕು: ಗರ್ಭ ಧರಿಸುವುದು ಹಾಗೂ ಸಂತಾನೋತ್ಪತ್ತಿ ಮಹಿಳೆಯ ಮೂಲಭೂತ ಹಕ್ಕು. ಬೇಡದ ಗರ್ಭವನ್ನು ಒತ್ತಾಯಪೂರ್ವಕವಾಗಿ ಹೊರುವಂತೆ ಆಕೆಯ ಮೇಲೆ ಒತ್ತಡ ಹೇರಲಾಗದು. ಅದರಲ್ಲೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಗರ್ಭಪಾತಕ್ಕೆ ಅನುಮತಿ ಇಲ್ಲ ಎನ್ನಲಾಗದು. ಅತ್ಯಾಚಾರಕ್ಕೆ ಸಿಲುಕಿದ ಹೆಣ್ಣುಮಗಳಿಗೆ ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಈಗಾಗಲೇ ನೊಂದಿರುವ ಆಕೆಗೆ ಮತ್ತಷ್ಟು ಶಿಕ್ಷೆ ನೀಡಿದಂತೆ. ಆದ್ದರಿಂದ ವೈದ್ಯಕೀಯ ಶಿಫಾರಸು ಹಾಗೂ ಕಾನೂನು ನಿಗದಿ ಮಾಡಿರುವ ಅವಧಿ ಮೀರಿದ್ದರೂ ತಾಯಿಯ ಸುರಕ್ಷತೆಗೆ ಧಕ್ಕೆಯಾಗದಂತೆ ಭ್ರೂಣ ತೆಗೆಯಲು ವೈದ್ಯಾಧಿಕಾರಿಗಳಿಗೆ ನಿರ್ದೇಶಿಸುವ ಮೂಲಕ ನ್ಯಾ. ಸಂಜಯಗೌಡ ಅವರಿದ್ಧ ಪೀಠ ಮಹತ್ವದ ತೀರ್ಪು ನೀಡಿತು. ವೈದ್ಯಕೀಯ ಗರ್ಭಪಾತ ಕಾಯ್ದೆ 1971ರ ಸೆಕ್ಷನ್ 3ರ ಅಡಿ ಗರ್ಭ ಧರಿಸಿ 24 ವಾರಗಳು ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದು ವೈದ್ಯಕೀಯ ಅಧಿಕಾರಿ ತಿಳಿಸಿದ್ದರು.
- ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಒಪ್ಪಿಗೆ :ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಆಪ್ ಕಂಪನಿ ಒಡೆತನಕ್ಕೆ ನೀಡಿದ್ದ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ವಿಮಾನ ನಿಲ್ದಾಣ ನೌಕರರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ವಿಮಾನ ನಿಲ್ದಾಣ ಗುತ್ತಿಗೆ ನೀಡುವ ನಿರ್ಧಾರ ಕೇಂದ್ರದ ನೀತಿ ನಿರ್ಣಯಕ್ಕೆ ಬಿಟ್ಟ ವಿಚಾರ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಕೇಂದ್ರದ ಖಾಸಗೀಕರಣ ನೀತಿಯನ್ನು ಎತ್ತಿ ಹಿಡಿಯಿತು.
ಇದನ್ನೂ ಓದಿ: 2021ರಲ್ಲಿ ಶಿವಮೊಗ್ಗ: ಇಲ್ಲಿವೆ ಅತ್ಯಂತ ಪ್ರಮುಖ ಘಟನೆಗಳು