ಬೆಂಗಳೂರು: ಕೊರೊನಾ ಸೋಂಕು ಕಾಲಿಟ್ಟ ಮೇಲೆ ರಾಜ್ಯ ಅಭಿವೃದ್ಧಿ ಕಂಡಿತೋ ಇಲ್ಲವೋ ಗೊತ್ತಿಲ್ಲ. ಆದರೆ, ನಗರದ ಆರೋಗ್ಯ ಕೇಂದ್ರಗಳಲ್ಲಿ ಕಾಣಿಸಿಕೊಂಡಿದ್ದ ಸಿಬ್ಬಂದಿ ಕೊರತೆ ನೀಗಿದ್ದಂತೂ ಸತ್ಯ. ಜೊತೆಗೆ ಆಸ್ಪತ್ರೆಗಳ ಮೂಲ ಸೌಕರ್ಯಗಳಲ್ಲೂ ಸುಧಾರಣೆ ಕಂಡಿತು.
ಆರೋಗ್ಯ ಕೇಂದ್ರಗಳನ್ನು ಮಧ್ಯಮ ವರ್ಗ ಹಾಗೂ ಬಡವರೇ ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಈ ಕೇಂದ್ರಗಳಲ್ಲಿ ವೈದ್ಯರು, ವಿಶೇಷ ತಜ್ಞರು, ಶುಶ್ರೂಷಕರು ಡಿ - ಗ್ರೂಪ್ ನೌಕರರು, ಇತರ ಆಡಳಿತ ಹಾಗೂ ಆಡಳಿತೇತರ ಸಿಬ್ಬಂದಿ ಕೊರತೆ ಎದುರಾಗಿತ್ತು. ಕೊರೊನಾ ಶುರುವಾದ ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತು.
ಕೊರೊನಾ ಸಂದರ್ಭದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿ ಪಾತ್ರ ಪ್ರಮುಖವಾಗಿತ್ತು. ಆದರೆ, ಆ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಂಡು ಬಂದಿತ್ತು. ಜೊತೆಗೆ ಈ ಮಧ್ಯೆ ಗುತ್ತಿಗೆ - ಹೊರಗುತ್ತಿಗೆ ನೌಕರರ ಮುಷ್ಕರದ ಬಿಸಿಯೂ ಸರ್ಕಾರ ಎದುರಿಸಬೇಕಾಯಿತು.
ಶುಶ್ರೂಷಕರು -1419, ಲ್ಯಾಬ್ ಟೆಕ್ನಿಷಿಯನ್-506, ಫಾರ್ಮಾಸಿಸ್ಟ್ - 906 ಹುದ್ದೆಗಳು ಹಾಗೂ ಗ್ರೂಪ್ ಹುದ್ದೆಗಳು ಖಾಲಿ ಇದ್ದವು. ಸಮಪರ್ಕ ವೈದ್ಯಕೀಯ ಸೇವೆ ಒದಗಿಸಲು ಖಾಲಿ ಇರುವ ಹುದ್ದೆಗಳನ್ನು ತಾತ್ಕಾಲಿಕವಾಗಿ ಆರು ತಿಂಗಳ ಮಟ್ಟಿಗೆ ನೇರ ನೇಮಕಾತಿಗೆ ಸರ್ಕಾರ ಆದೇಶಿಸಿತ್ತು. ಅದರಂತೆ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲಾಗಿತ್ತು.
ಮತ್ತೊಂದೆಡೆ ಮೂರು ಬಾರಿ ವಯೋನಿವೃತ್ತಿ ಸಿಬ್ಬಂದಿ ಅವಧಿ ವಿಸ್ತರಣೆ ಮಾಡಲಾಗಿದೆ. ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈದ್ಯಕೀಯ, ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿ ಸೇವೆ ಅವಧಿಯನ್ನು ಡಿ.31ರವರೆಗೆ ವಿಸ್ತರಿಸಲಾಗಿದೆ.
ಸಿಲಿಕಾನ್ ಸಿಟಿಯ ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡಲಾಗಿದ್ದು, ಪಾಲಿಕೆಯೇ ಅದರ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ಈ ಕುರಿತು ಮಾತನಾಡಿದ ಪಾಲಿಕೆಯ ಆರೋಗ್ಯಾಧಿಕಾರಿ ವಿಜಯೇಂದ್ರ, ಈಗಾಗಲೇ ನಿಯೋಜಿಸಿರುವ ಸಿಬ್ಬಂದಿಯನ್ನು ತೆಗೆಯುವ ಚಿಂತನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಪ್ರಮಾಣ ಇಳಿಮುಖಗೊಂಡಿದ್ದು, ಕೋವಿಡ್ ಕೇರ್ ಸೆಂಟರ್ನಲ್ಲಿದ್ದ ಸಿಬ್ಬಂದಿಯನ್ನು ಆರೋಗ್ಯ ಕೇಂದ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಹೆಚ್ಚುವರಿ ಸಿಬ್ಬಂದಿ ಇದ್ದರೆ ಪಾಲಿಕೆಯ ಆಡಳಿತ ವಿಭಾಗದ ಗಮನಕ್ಕೆ ತರಲಾಗುತ್ತದೆ ಎಂದರು.