ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಕರ್ನಾಟಕ ಧನ ವಿನಿಯೋಗ ವಿಧೇಯಕ'ವನ್ನು ವಿಧಾನ ಪರಿಷತ್ನಲ್ಲಿ ಮಂಡಿಸಿದರು. ಬಳಿಕ ವಿವರಣೆ ನೀಡಿದ ಅವರು, ಬಜೆಟ್ ಒಂದು ಅಂದಾಜು ಅಷ್ಟೇ. 37 ಸದಸ್ಯರು ಬಜೆಟ್ ಮೇಲೆ ಮಾತನಾಡಿದ್ದಾರೆ. ಸದಸ್ಯರು ನೀಡುವ ಮಾಹಿತಿ ಉತ್ತಮ ವಿವರವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಸಾಗಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಜನ ಸಾಮಾನ್ಯರಿಗೆ ಈ ಬಜೆಟ್ನ ಲಾಭ ಸಿಗಬೇಕು. ಆರ್ಥಿಕ ಚಟುವಟಿಕೆ ಮೂಲಕ ಉನ್ನತಿ ಆಗಬೇಕು. ಆಡಳಿತ ಮಾಡುವವರಿಗೆ ವಿಶ್ವಾಸ ತುಂಬುವ ರೀತಿ ನಾವು ನಡೆದುಕೊಳ್ಳಬೇಕು. ಆಗ ಜನರೂ ವಿಶ್ವಾಸದಿಂದ ಸ್ಪಂದಿಸುತ್ತಾರೆ. ಕೋವಿಡ್ ಸಂಕಷ್ಟದಿಂದ ರಾಜ್ಯ ಆಚೆ ಬರುತ್ತಿದ್ದ ಸಂದರ್ಭದಲ್ಲಿ ನಾನು ಅಧಿಕಾರ ವಹಿಸಿಕೊಂಡೆ. ನಿಧಾನವಾಗಿ ಆರ್ಥಿಕ ಚಟುವಟಿಕೆ ನಿಧಾನವಾಗಿ ಚೇತರಿಕೆ ಕಂಡು ಬಂತು ಎಂದು ಹೇಳಿದರು.
ಆರ್ಥಿಕ ಪ್ರಗತಿ ಆಗಲೇ ಬೇಕು. ರಾಜ್ಯದ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದು, ಬಜೆಟ್ ಮೊತ್ತ ಕಡಿಮೆ ಮಾಡುವ ಸಲಹೆ ನೀಡಿದರು. ಆದರೆ ಇದನ್ನು ಮಾಡಿದರೆ ಜನರಿಗೆ ಸಮಸ್ಯೆ ಆಗಲಿದೆ. ಬಜೆಟ್ ಮೊತ್ತ ಇಳಿಕೆ ಬೇಡ. ಹಲವು ವಿಚಾರವಾಗಿ ಚರ್ಚಿಸಿದ ಬಳಿಕ ಬಜೆಟ್ ಮಂಡಿದ್ದೇವೆ. ಪೂರಕ ಬಜೆಟ್ನಲ್ಲಿ 7,700 ಕೋಟಿ ರೂಪಾಯಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದರು.
ಮಾ.31 ರ ವೇಳೆಗೆ ಇನ್ನಷ್ಟು ಮೊತ್ತ ಹೆಚ್ಚಲಿದೆ. ವಿವಿಧ ರೂಪದ ತೆರಿಗೆ ಸಂಗ್ರಹದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದೇವೆ. ಆದಾಯ ಸಂಗ್ರಹ ಹೆಚ್ಚಾಗುತ್ತಿದೆ. ಕೇಂದ್ರದಿಂದ ಸಹ ಜಿಎಸ್ಟಿ ಪಾಲು ನಮಗೆ ಬಂದಿದೆ. ಇದರಿಂದ ಸ್ವಲ್ಪ ಅನುಕೂಲ ಉಂಟಾಗಿದೆ. ರಾಜಕೀಯ ಶಿಸ್ತನ್ನು ಅಳವಡಿಸಿಕೊಂಡಿದ್ದೇವೆ. ಸಾಲ ಪ್ರಮಾಣ ಕಡಿಮೆ ಮಾಡಲೂ ಯತ್ನಿಸಿದ್ದೇವೆ. ಆರ್ಥಿಕ ನಿರ್ವಹಣೆ ಸರಿದಾರಿಗೆ ತರುವ ಯತ್ನ ಮಾಡುತ್ತಿದ್ದೇವೆ. ಕೋವಿಡ್ ರಹಿತ ವರ್ಷವಾಗಿ ಮುಂದಿನ ವರ್ಷ ಸಿಗಲಿದೆ. ಆಗ ಅಲ್ಲಿ ಉತ್ತಮ ಅಭಿವೃದ್ಧಿ ನಿರೀಕ್ಷಿಸಿದ್ದೇವೆ ಎಂದರು.
ಸಭಾಪತಿಗಳು ಧನ ವಿನಿಯೋಗ ವಿಧೇಯಕವನ್ನು ಸದನದ ಮುಂದೆ ಮಂಡಿಸಿದರು. ವಿಧೇಯಕ ಅನುಮೋದನೆ ಪಡೆಯಿತು. ಬಳಿಕ 'ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕ'ವನ್ನು ಸಿಎಂ ಮಂಡಿಸಿದರು. ಪರಿಷತ್ನಲ್ಲಿ ಈ ವಿಧೇಯಕ ಸಹ ಅನುಮೋದನೆ ಪಡೆಯಿತು.
ಇದನ್ನೂ ಓದಿ: ಕೃಷಿ ಹೊಂಡ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು : ಸಿಎಂ ಭರವಸೆ