ಬೆಂಗಳೂರು: ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ನೀಡಿರುವ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿದೆ. ಈ ಬಗ್ಗೆ ನಾವು ಯಾವ ರೀತಿಯ ಹೋರಾಟ ಕೈಗೊಳ್ಳಬಹುದು ಎಂಬ ಕುರಿತು ಚಿಂತನೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದೇ ವೇಳೆ, ಸೋಮವಾರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದನ್ನು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ರಾಜ್ಯಪಾಲರ ಭಾಷಣ ಬರೀ ಶೂನ್ಯ, ಒಂದು ಪೇಪರ್ ಓದಿದ್ದಾರೆ ಎಂದು ಟೀಕಿಸಿದರು.
ದೇಶದ ಐಕ್ಯತೆ, ಶಾಂತಿಗೋಸ್ಕರ ಸಾಕಷ್ಟು ಮಹನೀಯರು ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು, ಒಂದು ರಾಷ್ಟ್ರ ಧ್ವಜವನ್ನು ನೀಡಿದರು. ಅದನ್ನು ತೆಗೆದು ಹಾಕಿ ಕೇಸರಿ ಧ್ವಜ ಏರಿಸಬೇಕು ಎಂದು ಒಬ್ಬ ಮಂತ್ರಿ ಮಾತನಾಡಿದ್ದು, ಆ ಬಗ್ಗೆ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.
ಇನ್ನು, ರಾಗಿ, ತೊಗರಿ, ಭತ್ತ ಹಾಗೂ ಜೋಳ ಬೆಳೆದ ರೈತರಿಗೆ ಬೆಂಬಲ ಬೆಲೆ ನೀಡದೇ ಸರ್ಕಾರ ಸತಾಯಿಸುತ್ತಿದೆ. ಹಾಲಿಗೂ ಸಹ ಉತ್ತಮ ಬೆಲೆ ಇಲ್ಲದಂತಾಗಿದೆ. ಈ ಎಲ್ಲ ವಿಚಾರವನ್ನು ಸಹ ನಾವು ಸದನದಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮಂಗಳೂರು ಹಿಜಾಬ್ ವಿವಾದದ ವಿಡಿಯೋ ವೈರಲ್ ಸುಳ್ಳು ಸುದ್ದಿ: ಪೊಲೀಸ್ ಆಯುಕ್ತ
ಜಮೀರ್ ಹೇಳಿಕೆ ವಿವಾದ: ಹಿಜಾಬ್ ಕುರಿತು ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ವೈಯಕ್ತಿಕ. ಇದನ್ನು ಪಕ್ಷ ಒಪ್ಪುವುದಿಲ್ಲ. ಅವರು ಕ್ಷಮೆಯಾಚನೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇವೆ, ಅವರು ಕ್ಷಮೆಯಾಚಿಸುತ್ತಾರೆ ಎಂದರು. ಈ ಬಗ್ಗೆ ತಾವು ಅವರ ಜೊತೆ ಸಮಾಲೋಚಿಸಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ ಉತ್ತರಿಸದೇ ತೆರಳಿದರು.