ಬೆಂಗಳೂರು: ತತ್ವ ನಿಷ್ಠೆಗೆ ಈಗ ಅಗ್ನಿ ಪರೀಕ್ಷೆಯ ಕಾಲ. ನಾವೂ ಸಹ ಇಂತಹ ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇವೆ. 'ವಸಂತಕಾಲ ಸಂಪ್ರಾಪ್ತ ಕಾಕ ಕಾಕಹ, ಪಿಕ ಪಿಕಹಾ' ಎಂಬ ಸಂಸ್ಕೃತದ ನಾಣ್ಣುಡಿಯಂತೆ ಕಾಲ ಬಂದಾಗ ತತ್ವ ನಿಷ್ಠರು ಯಾರು? ಅವಕಾಶವಾದಿಗಳು ಯಾರು? ಎಂಬುದು ಗೊತ್ತಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ ಟಿ ರವಿ ಮಾರ್ಮಿಕವಾಗಿ ನುಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆ ಸುದ್ದಿಗಾರರಿಗೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಗೆ, ಕೋಗಿಲೆ ಎರಡೂ ಕಪ್ಪು. ಆದರೆ, ವಸಂತ ಕಾಲ ಬಂದಾಗಲೇ ಕಾಗೆ, ಕೋಗಿಲೆ ಯಾವುದು ಎಂಬುದು ಗೊತ್ತಾಗುತ್ತದೆ ಎಂದು ತಮ್ಮ ಪಕ್ಷದ ಕೆಲ ಶಾಸಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ನಮ್ಮದು ತ್ಯಾಗದ ರಾಜಕಾರಣವೂ ಅಲ್ಲ, ಪರಮಸ್ವಾರ್ಥದ ರಾಜಕಾರಣವೂ ಅಲ್ಲ. ತತ್ವ ನಿಷ್ಠೆಯ ರಾಜಕಾರಣ ಮಾತ್ರ. ನಾವು ರಾಜಕಾರಣದಲ್ಲಿ ರಾಜಕೀಯ ವಿರೋಧಿಗಳಷ್ಟೇ ಅಲ್ಲ. ಎಡ ಬಲದಲ್ಲಿ ಇರುವವರ ಜತೆಯೂ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈಗಿರುವ ಖಾತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಖಾತೆ ಬದಲಾದರೆ ಆಗ ಅದರಲ್ಲಿ ಕೆಲಸ ಮಾಡುತ್ತೇನೆ. ಖಾತೆ ಬದಲಾವಣೆ ರಿಲೇ ಬ್ಯಾಟನ್ ಇದ್ದಂಗೆ. ಯಾವ ಬ್ಯಾಟನ್ ಕೊಡ್ತಾರೋ ಅದನ್ನು ಹಿಡಿಯುತ್ತೇನೆ. ಅದು ಪ್ರವಾಸೋದ್ಯಮ ಆಗಿರಬಹುದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಗಿರಬಹುದು, ಇನ್ನೊಂದು ಆಗಿರಬಹುದು ಎಂದರು.
ಸಭೆ ನಡೆಸುತ್ತಿರುವ ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಸಚಿವನಾಗಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ. ಅವರ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರ ಭಾವನೆಗಳೂ ಅರ್ಥವಾಗುತ್ತದೆ. ಏನು ಹೇಳಬೇಕೋ ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳುತ್ತೇನೆ ಎಂದರು.
ಸಂರಕ್ಷಣೆ: ಪುರಾತನ ಕಟ್ಟಡಗಳು, ಕಲ್ಯಾಣಿ, ದೇವಸ್ಥಾನ ಮತ್ತಿತರ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸ್ಥಳಗಳನ್ನು ಸಂರಕ್ಷಣೆ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದರು.