ಬೆಂಗಳೂರು: ರದ್ದುಗೊಂಡಿದ್ದ ಬಿಜೆಪಿ ಸರ್ಕಾರದ 3 ವರ್ಷ ಹಾಗೂ ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಜನರ ಮುಂದೆ ಬಿಂಬಿಸುವ ಜನೋತ್ಸವ ಕಾರ್ಯಕ್ರಮವನ್ನು ಆ.28 ರಂದು ನಡೆಸಲು ನಿರ್ಧರಿಸಲಾಗಿದೆ.
ಇದರ ಪೂರ್ವ ಸಿದ್ದತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು. ಈ ಹಿಂದೆ ನಿಗದಿಯಾಗಿದ್ದ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ನಡೆಯಲಿದೆ.
ಜು.28ರಂದು ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ರದ್ದುಪಡಿಸಲಾಗಿತ್ತು. ಆದರೆ, ಮತ್ತೆ ಆ. 28ರಂದು ದೊಡ್ಡಬಳ್ಳಾಪುರದಲ್ಲಿಯೇ ಜನೋತ್ಸವ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮುಖಂಡರನ್ನು ಆಹ್ವಾನಿಸುವ ಉದ್ದೇಶವಿದ್ದು, ಯಾವ ರೀತಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎನ್ನುವ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸಚಿವ ಆರ್. ಅಶೋಕ್, ಮುನಿರತ್ನ, ಎಸ್.ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಬೈರತಿ ಬಸವರಾಜ್, ಶಾಸಕ ಮಸಾಲೆ ಜಯರಾಮ್, ಮಾಜಿ ಶಾಸಕ ಸಂಪಂಗಿ, ಮಂಜುನಾಥಗೌಡ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: 3&1..ಗಮನ ಸೆಳೆಯುತ್ತಿದೆ ಜನೋತ್ಸವ ಕಾರ್ಯಕ್ರಮದ ಲೋಗೋ ವಿನ್ಯಾಸ..!