ಬೆಂಗಳೂರು: ನವೆಂಬರ್ 19 ರಿಂದ ಬಿಜೆಪಿ ನಾಯಕರು 'ಜನ ಸ್ವರಾಜ್ ಯಾತ್ರೆ' ಹೆಸರಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಯಡಿಯೂರಪ್ಪ ಸೇರಿ ನಾಲ್ವರು ನಾಯಕರ ನೇತೃತ್ವದ ತಂಡ ರಾಜ್ಯ ಪ್ರವಾಸ ಪ್ರಾರಂಭಿಸಲಿದೆ. ಈ ಮೊದಲು ನವೆಂಬರ್ 12ರಿಂದ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು. ಸದ್ಯ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಮುಂಚೆ ಮಾಜಿ ಸಿಎಂ ಡಿವಿಎಸ್ ನೇತೃತ್ವದ ತಂಡ ರಾಜ್ಯ ಪ್ರವಾಸ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೊನೆ ಕ್ಷಣದಲ್ಲಿ ಡಿವಿಎಸ್ ಬದಲು ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಒಂದು ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದೆ. ನಾಲ್ವರು ಪ್ರಮುಖ ನಾಯಕರಿಂದ ನಾಲ್ಕು ತಂಡಗಳಾಗಿ ನಾಲ್ಕು ವಿಭಾಗಳಲ್ಲಿ 'ಜನ ಸ್ವರಾಜ್ ಯಾತ್ರೆ' ನಡೆಯಲಿದೆ.
ಯಾರ ನೇತೃತ್ವದ ತಂಡ ಎಲ್ಲಿಗೆ ಪ್ರವಾಸ:
ಕಟೀಲ್ ತಂಡ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ನವೆಂಬರ್ 19 - 21 ರವರೆಗೆ ಮೊದಲ ಹಂತದ ಯಾತ್ರೆ ನಡೆಸಲಿದೆ. ಈ ತಂಡ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಕಟೀಲ್ ತಂಡದಲ್ಲಿ ಭಗವಂತ್ ಖೂಬಾ, ಆರಗ ಜ್ಞಾನೇಂದ್ರ, ವಿ. ಸೋಮಣ್ಣ, ನಿರಾಣಿ, ರಾಜುಗೌಡ, ಎನ್. ಮಹೇಶ್, ಮಾಲೀಕಯ್ಯ ಗುತ್ತೇದಾರ್, ಪ್ರತಾಪ್ ಸಿಂಹ ಇರಲಿದ್ದಾರೆ.
ಬಿಎಸ್ವೈ ತಂಡ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡ ನವೆಂಬರ್ 19 - 21 ರವರೆಗೆ ಮೊದಲ ಹಂತದ ಯಾತ್ರೆ ನಡೆಸಲಿದೆ. ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಯಡಿಯೂರಪ್ಪ ತಂಡದಲ್ಲಿ ಪ್ರಹ್ಲಾದ್ ಜೋಷಿ, ತೇಜಸ್ವಿನಿ ಅನಂತ್ ಕುಮಾರ್, ಶ್ರೀರಾಮುಲು, ಗೋವಿಂದ ಕಾರಜೋಳ, ಎಂ.ಬಿ.ನಂದೀಶ್ ಇರಲಿದ್ದಾರೆ.
ಕೆಎಸ್ಈ ತಂಡ: ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಈಶ್ವರಪ್ಪ ತಂಡದಲ್ಲಿ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಎಸ್.ಟಿ. ಸೋಮಶೇಖರ್, ಹಾಲಪ್ಪ ಆಚಾರ್, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಎಂ.ಶಂಕರಪ್ಪ ಇರಲಿದ್ದಾರೆ.
ಶೆಟ್ಟರ್ ತಂಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ನವೆಂಬರ್ 19 - 22 ರವರೆಗೆ ಮೊದಲ ಹಂತದ ಯಾತ್ರೆಯನ್ನು ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಡೆಸಲಿದೆ. ಶೆಟ್ಟರ್ ತಂಡದಲ್ಲಿ ಸಚಿವ ಅಶ್ವತ್ಥ್ ನಾರಾಯಣ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಬೈರತಿ ಬಸವರಾಜ್, ಗೋಪಾಲಯ್ಯ, ಬಿ. ವೈ. ವಿಜಯೇಂದ್ರ, ಎಂ.ರಾಜೇಂದ್ರ ಇದ್ದಾರೆ.