ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕರ್ನಾಟಕ ಬಂದ್ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರ ನಿರ್ಧಾರವನ್ನು ಹಿಂಪಡೆಯದಿದ್ದರೆ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಖಚಿತ ಎಂದು ಎಚ್ಚರಿಸಿದವು.
ವುಡ್ಲ್ಯಾಂಡ್ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಪ್ರವೀಣ್ ಶೆಟ್ಟಿ ಗೈರಾಗಿದ್ದರು.
ಸಭೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡುತ್ತೇವೆ. ಸರ್ಕಾರಕ್ಕೆ ನವೆಂಬರ್ 30ರವರೆಗೂ ಗಡುವು ನೀಡುತ್ತೇವೆ. ನಿರ್ಧಾರ ಬದಲಿಸಿಕೊಂಡಿಲ್ಲವಾದರೆ ಡಿ. 5ರಂದು ಕರ್ನಾಟಕ ಬಂದ್ ಖಚಿತ. ನ. 23ರಂದು ಬಳ್ಳಾರಿ ಗಡಿ, 24ರಂದು ಕೊಪ್ಪಳ ಗಡಿ, 26ರಂದು ಅತ್ತಿಬೆಲೆ, 30ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಮಾಡುತ್ತೇವೆ ಎಂದು ಹೇಳಿದರು.
ಸಾ.ರಾ.ಗೋವಿಂದು ಮಾತನಾಡಿ, ಕನ್ನಡಿಗರು ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು. ಕನ್ನಡ ಉಳಿಯಬೇಕು ಅಂದರೆ ಎಲ್ಲರೂ ಒಂದಾಗಬೇಕು. ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಸಮರ್ಥನೆ ಮಾಡಿಕೊಳ್ಳುವವರು ದ್ರೋಹಿಗಳು ಎಂದರು. ಇದೇ ವೇಳೆ ಲಾಯರ್ ಅಸೋಸಿಯೇಷನ್, ಆಟೋ, ಟ್ಯಾಕ್ಸಿ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ರೈತ ಸಂಘ, ಕಾರ್ಮಿಕ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಲಾಯಿತು.