ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿ ರಸ್ತೆಯ ಮೋಹನ್ ಥಿಯೇಟರ್ ಬಳಿ ನಿನ್ನೆ ರಾತ್ರಿ ನಡೆದ ಬರ್ಬರ ಹತ್ಯೆ ಪ್ರಕರಣದಲ್ಲಿ ಇಬ್ಬರು ಮಂಗಳಮುಖಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮನೋಜ್ ಕೊಲೆಯಾದ ಯುವಕ. ನಿನ್ನೆ ರಾತ್ರಿ ಹೆಗ್ಗನಹಳ್ಳಿ ಬಳಿ ಹೋಗುವಾಗ ಹಿಂಬದಿಯಿಂದ ಆಟೋದಲ್ಲಿ ಆರೋಪಿಗಳು ಬಂದು ಅಲ್ಲೇ ಇದ್ದ ಹೂವಿನಕುಂಡದಿಂದ ಮನೋಜ್ ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಕೃತ್ಯ ನಡೆದ ಒಂದೇ ಗಂಟೆಯಲ್ಲಿ ಇಬ್ಬರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ಮನೋಜ್, ಮಂಗಳಮುಖಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ. ಮಂಗಳಮುಖಿಯನ್ನು ಬಿಟ್ಟು ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇರೆಗೆ ದ್ವೇಷದಿಂದ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.