ಬೆಂಗಳೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ ನೀಡುವ 1500 ಕೋಟಿ ರೂ. ಜೊತೆಗೆ 3 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಬೇಕು ಎಂಬ ತಮ್ಮ ನೇತೃತ್ವದ ಶಾಸಕರ ನಿಯೋಗದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಿದ್ದ ತಮ್ಮ ಭಾಗದ 10ಕ್ಕೂ ಹೆಚ್ಚು ಶಾಸಕರು, ಮುಖ್ಯಮಂತ್ರಿಗಳ ಬಳಿಗೆ ತೆರಳಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಬೇಕು. ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. 371 ಜೆ ರೀತ್ಯ ನೇಮಕಾತಿಗಳು ನಡೆಯಬೇಕು ಎಂದು ಒತ್ತಾಯಿಸಲು ತೀರ್ಮಾನಿಸಿದ್ದಂತೆ ಇಂದು ತಮ್ಮ ನೇತೃತ್ವದಲ್ಲಿ 12 ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು ಎಂದು ಅವರು ತಿಳಿಸಿದರು.
![ಸಿಎಂ ಭೇಟಿಯಾದ ಶಾಸಕರು](https://etvbharatimages.akamaized.net/etvbharat/prod-images/kn-bng-05-khandre-cm-meet-script-7208077_03022022211249_0302f_1643902969_120.jpg)
ಕಳೆದ 3 ವರ್ಷಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶ ಸರ್ಕಾರದ ತೀವ್ರ ಕಡೆಗಣನೆಗೆ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಬೀದರ್ನಿಂದ ಬೆಂಗಳೂರುವರೆಗೆ ಕ್ರಾಂತಿ ಯಾತ್ರೆ ಮಾಡುವ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಕಳೆದ ಬಜೆಟ್ನಲ್ಲಿ 1500 ಕೋಟಿ ರೂಪಾಯಿ ನೀಡಲಾಗಿದ್ದರೂ, ಆ ಹಣದಲ್ಲಿ ಬಹುಪಾಲು(ಶೇ.80) ಖರ್ಚು ಮಾಡಿಲ್ಲ. ಈ ಭಾಗದ ಹಲವು ನೀರಾವರಿ ಯೋಜನೆಗಳು ಬಜೆಟ್ನಲ್ಲಿ ಪ್ರಸ್ತಾಪವಾಗಿ, ತಾಂತ್ರಿಕ ಅನುಮೋದನೆ ಪಡೆದಿದ್ದರೂ, ಆಡಳಿತಾತ್ಮಕ ಅನುಮೋದನೆ ನೀಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲು ಸಭೆ ತೀರ್ಮಾನಿಸಿತ್ತು. ಅದರಂತೆ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ, ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಆಲಿಸಿದ ಮುಖ್ಯಮಂತ್ರಿಗಳು ನಾವು ನೀಡಿರುವ ಮನವಿಯಲ್ಲಿನ ಅಂಶಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.
ಇತ್ತೀಚೆಗೆ ನಡೆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ 371 ಜೆ ರೋಸ್ಟರ್ ನಿಯಮಗಳನ್ನು ಗಾಳಿಗೆ ತೂರಿದ್ದು, ಇದರಿಂದ ಕಲ್ಯಾಣ ಕರ್ನಾಟಕ ಭಾಗದ ನೂರಾರು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. 371 ಜೆ ಉದ್ದೇಶವೇ ನಿರರ್ಥಕವಾಗಿದೆ ಎಂಬ ಅಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ, ಈ ಬಗ್ಗೆ ಪರಿಶೀಲಿಸಿ, ಆಗಿರುವ ಲೋಪ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
2020ರ ಜೂನ್ ತಿಂಗಳಲ್ಲಿ ಹೊರಡಿಸಿದ ಸುತ್ತೋಲೆಯಿಂದ ಇಂತಹ ಪ್ರಮಾದ ಆಗಿದ್ದು, ಕೂಡಲೇ ಆ ಸುತ್ತೋಲೆ ಹಿಂಪಡೆದು 2016ರ ಸುತ್ತೋಲೆಯ ರೀತ್ಯವೇ ನೇಮಕಾತಿ ಆಗಬೇಕು ಎಂದು ಈಶ್ವರ ಖಂಡ್ರೆ ನೇತೃತ್ವದ ಶಾಸಕರ ನಿಯೋಗ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿತು. ಈ ಬೇಡಿಕೆಗಳಿಗೂ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಶಾಸಕರಾದ ರಾಜಶೇಖರ್ ಪಾಟೀಲ್, ಬಸನಗೌಡ ದದ್ದಲ್, ಪರಮೇಶ್ವರ್ ನಾಯಕ್, ಅಮರೇಗೌಡ ಬಯ್ಯಾಪುರ, ಎಮ್.ವೈ.ಪಾಟೀಲ್, ಡಿ.ಎಸ್. ಹುಲಿಗೇರಿ, ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಶರಣಗೌಡ ಬಯ್ಯಾಪುರ ಇದ್ದರು.
(ಇದನ್ನೂ ಓದಿ: ನೌಕರಿ ಆಮಿಷವೊಡ್ಡಿ ನಗ್ನ ಫೋಟೋ, ವಿಡಿಯೋ ಮೂಲಕ ಬ್ಲಾಕ್ಮೇಲ್: ಶಿರಸಿಯಲ್ಲಿ ಮೂವರು ಅಂದರ್)