ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಕೋಲಾರದಲ್ಲಿ ಜನಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಿಂದ ಇಂದು ಬೆಳಗ್ಗೆ ಕೋಲಾರಕ್ಕೆ ಪ್ರಯಾಣ ಬೆಳೆಸಿರುವ ಡಿಕೆಶಿ ದಿನವಿಡಿ ಕೋಲಾರದಲ್ಲಿಯೇ ಇರಲಿದ್ದಾರೆ. ಬೆಳಗ್ಗೆ ತೆರಳಿದ ಕೂಡಲೇ ಮೊದಲು ಕೋಲಾರ ಕುರುಡುಮಲೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಇಂದು ಮಧ್ಯಾಹ್ನ ಕೋಲಾರದಲ್ಲಿ ಜನ ಧ್ವನಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ.
ಪ್ರಸಕ್ತ ವರ್ಷವನ್ನು ಸಂಘರ್ಷದ ವರ್ಷ ಎಂದು ಘೋಷಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟಿರುವ ರಾಜ್ಯ ಕಾಂಗ್ರೆಸ್ ಪಕ್ಷ, ಜನಧ್ವನಿ ಕಾರ್ಯಕ್ರಮದ ಮೂಲಕ ಬಿಜೆಪಿಯ ದುರಾಡಳಿತ ಹಾಗೂ ಕಾಂಗ್ರೆಸ್ ಪಕ್ಷ ಈ ಹಿಂದೆ ನೀಡಿದ್ದ ಸವಲತ್ತುಗಳನ್ನು ಜನರಿಗೆ ವಿವರಿಸುವ ಕಾರ್ಯ ಮಾಡುತ್ತಿದೆ. ಇದರ ಭಾಗವಾಗಿಯೇ ರಾಜ್ಯದ ವಿವಿಧ ಭಾಗಗಳಲ್ಲಿ ಜನಧ್ವನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಕೋಲಾರ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಜೆ ತನ್ವೀರ್ ಭೇಟಿ ಸಾಧ್ಯತೆ?: ಸಂಜೆ ಕೋಲಾರದಿಂದ ವಾಪಸ್ ಆದ ಬಳಿಕ ಮಾಜಿ ಸಚಿವ ತನ್ವೀರ್ ಸೇಠ್ ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಯಿದೆ. ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ತನ್ವೀರ್ ವಿರುದ್ಧ ಕೇಳಿ ಬಂದ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟೀಕರಣ ಕೇಳಿದ್ದಾರೆ.
ಇಂದು ಬೆಳಗ್ಗೆ 11ಗಂಟೆಗೆ ಸದಾಶಿವನಗರದ ನಿವಾಸದಲ್ಲಿ ಡಿಕೆಶಿ ಅವರನ್ನು ಭೇಟಿಯಾಗಲು ತನ್ವೀರ್ ಸೇಠ್ ನಿರ್ಧರಿಸಿದ್ದರು. ಆದರೆ, ಡಿಕೆಶಿ ಕೋಲಾರಕ್ಕೆ ತೆರಳಿರುವ ಹಿನ್ನೆಲೆ ಭೇಟಿ ಸಂಜೆಯಾಗುವ ಸಾಧ್ಯತೆಯಿದೆ.
ಮೇಯರ್ ಸ್ಥಾನ ಈ ಸಾರಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಲು ಈ ಹಿಂದೆ ಜೆಡಿಎಸ್ ಜೊತೆ ಮಾತುಕತೆ ನಡೆಸಲಾಗಿತ್ತು. ಮೇಯರ್ ಚುನಾವಣೆ ಜವಾಬ್ದಾರಿಯನ್ನು ತನ್ವೀರ್ ಸೇಠ್ಗೆ ನೀಡಲಾಗಿತ್ತು. ಆದರೆ, ಕಡೆಯ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಮೈಸೂರು ಮೇಯರ್ ಆಗಿ ಆಯ್ಕೆಯಾಗುವಲ್ಲಿ ಸಫಲರಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗೆ ಹಿನ್ನೆಡೆ ಉಂಟಾಗಲು ತನ್ವಿರ್ ಸೇಠ್ ನಿರ್ಧಾರವೇ ಕಾರಣ ಎಂದು ಆರೋಪಿಸಲಾಗಿದೆ. ಇದಕ್ಕೆ ಸೂಕ್ತ ಸ್ಪಷ್ಟೀಕರಣ ನೀಡಲು ತನ್ವೀರ್ ಸೇಠ್ ಆಗಮಿಸಲಿದ್ದಾರೆ.
ಡಿಕೆಶಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ : ಕೋಲಾರದ ಗಡಿ ರಾಮಸಂದ್ರ ಬಳಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಯಾಗಿದ್ದು, ಬೃಹತ್ ಹಾರ ಹಾಗೂ ತೆರೆದ ವಾಹನದಲ್ಲಿ ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆ ಪೂರ್ವ ತಯಾರಿ ಹಿನ್ನೆಲೆ ಕೋಲಾರಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮಿಸುತ್ತಿದ್ದು, ಮೂಡಣಬಾಗಿಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಹಿಂದೆ ಎಸ್.ಎಂ.ಕೃಷ್ಣ ಕುರುಡುಮಲೆಯಲ್ಲಿ ಪಂಚಜನ್ಯ ಮೊಳಗಿಸಿ ಅಧಿಕಾರಕ್ಕೆ ಬಂದಿದ್ದರು. ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಕುರುಡು ಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿದ ಬಳಿಕ, ಆಂಜನೆಯ ಸ್ವಾಮಿ ದೇವಾಲಯ ಹಾಗೂ ದರ್ಗಾಗೆ ಡಿಕೆಶಿ ಭೇಟಿ ನೀಡಲಿದ್ದಾರೆ.
ಇವರಿಗೆ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮದ್, ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಸಾಥ್ ನೀಡಲಿದ್ದಾರೆ. ಇನ್ನು, ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕೆ ಹೆಚ್ ಮುನಿಯಪ್ಪ, ರಮೇಶ್ ಕುಮಾರ್ ಸೇರಿ ಜಿಲ್ಲೆಯ ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.