ಬೆಂಗಳೂರು: ಇನ್ನೂ ನಿಗೂಢವಾಗಿಯೇ ಇರುವ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣದ ಬೆನ್ನಲ್ಲೇ ಐಟಿ ಇಲಾಖೆ ಹೇಳಿಕೆ ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಸಿದ್ಧಾರ್ಥ್ ಅವರಿಗೆ ಇಲಾಖೆಯಿಂದ ಯಾವುದೇ ತೊಂದರೆಯಾಗಿಲ್ಲ ಎಂಬ ಹೇಳಿಕೆ ನೀಡುವ ಜೊತೆಗೆ ಸದ್ಯ ದೊರೆತಿರುವ ವಿದಾಯ ಪತ್ರದಲ್ಲಿನ ಸಹಿ ಸಿದ್ಧಾರ್ಥ್ ಅವರದೇನಾ ಎಂದು ಅನುಮಾನ ವ್ಯಕ್ತಪಡಿಸಿದೆ.
ಕಂಪನಿಯ ದಾಖಲೆಯಲ್ಲಿರುವ ಸಿದ್ಧಾರ್ಥ್ ಸಹಿಗೂ, ಸಿಕ್ಕಿರುವ ವಿದಾಯ ಪತ್ರದಲ್ಲಿನ ಅವರ ಸಹಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಐಟಿ ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕದ ಪ್ರಭಾವಿ ರಾಜಕಾರಣಿಯೊಬ್ಬರ ಮೇಲಿನ ಆರೋಪ ಸಂಬಂಧ ಶೋಧ ಕಾರ್ಯ ನಡೆಸಿದ ವೇಳೆ ಸಿಂಗಾಪುರ ಮೂಲದ ವ್ಯಕ್ತಿ ಬಳಿ ದಾಖಲೆ ಇಲ್ಲದ ಹಣ ಪತ್ತೆಯಾಗಿತ್ತು. ಆ ಹಣ ಉದ್ಯಮಿ ಸಿದ್ಧಾರ್ಥ್ ಅವರಿಗೆ ಸೇರಿದ್ದು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಇದರ ಜಾಡು ಹಿಡಿದ ಐಟಿ ಅಧಿಕಾರಿಗಳಿಗೆ ಸಿದ್ಧಾರ್ಥ್ ಬಳಿ 362 ಕೋಟಿ ರೂ. ದಾಖಲೆ ಇಲ್ಲದ ಹಣವಿದೆ ಎಂಬುದು ಪತ್ತೆಯಾಗಿತ್ತು. ಸಿದ್ದಾರ್ಥ್ ಸುಳ್ಳು ದಾಖಲೆ ನೀಡಿ ಕಾಫಿ ಡೇ ಮಾರಾಟ ಮಾಡಿದ್ದರು ಎಂಬ ವಿಚಾರ ಸಹ ಬಯಲಾಗಿತ್ತಂತೆ. ಮಾಧ್ಯಮ ವರದಿ ಅಧರಿಸಿ ಮೈಂಡ್ ಟ್ರೀ ಸಂಸ್ಥೆಯಲ್ಲಿರುವ ಸಿದ್ಧಾರ್ಥ್ ಅವರ ಶೇ.22ರಷ್ಟು ಷೇರು ಮೌಲ್ಯ ಒಟ್ಟು ಮಾಡಿದ ಐಟಿಗೆ, ಸಿದ್ಧಾರ್ಥ್ ನೂರಾರು ಕೋಟಿ ತೆರಿಗೆ ವಂಚನೆ ಮಾಡಿದ್ದು ತಿಳಿದುಬಂದಿತ್ತು. ಈ ಸಂಬಂಧ ಐಟಿ ದಂಡ ಕೂಡ ಹಾಕಿತ್ತು.
ಸಿದ್ಧಾರ್ಥ್ ಐಟಿಗೆ ಪತ್ರ ಬರೆದು ಮನವಿ ಮಾಡಿದಾಗ ಮೈಂಡ್ ಟ್ರೀ ಷೇರನ್ನು ಮಾತ್ರ ಬಿಡುಗಡೆ ಮಾಡಿ, ಬದಲಾಗಿ ಕಾಫಿ ಡೇ ಎಂಟರ್ ಪ್ರೈಸಸ್ ಷೇರುಗಳನ್ನು ವಶಕ್ಕೆ ಪಡೆದಿತ್ತು. ಷರತ್ತಿನ ಅನುಸಾರ ಮೈಂಡ್ ಟ್ರೀ ಷೇರುಗಳ ಮಾರಾಟದ ಹಣವನ್ನು ಕೇವಲ ಸಾಲ ಮರುಪಾವತಿಗೆ ಮಾತ್ರ ಉಪಯೋಗಿಸಬೇಕು ಎಂದೂ ಐಟಿ ಸೂಚನೆ ನೀಡಿತ್ತು. ಈ ಎಲ್ಲಾ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ ಮೂಲಕ ನೀಡಿರುವ ಐಟಿ ಅಧಿಕಾರಿಗಳು, ಸಿದ್ಧಾರ್ಥ್ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.