ಬೆಂಗಳೂರು : ಸಚಿವ ಸಿ.ಟಿ.ರವಿ ತಮ್ಮದೇ ಇತಿಹಾಸ ಹೇಳಿದರೆ ಹೊರತು ಭಾರತದ ವಾಸ್ತವ ಇತಿಹಾಸವನ್ನಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಕುಟುಕಿದರು.
ವಿಧಾನಸಭೆಯಲ್ಲಿ ಇಂದು ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಮನಸ್ಸಿನಲ್ಲಿ ನೋವಿದೆ. ಏಕೆಂದರೆ ನಾನು ದಲಿತ ಸಮುದಾಯಕ್ಕೆ ಸೇರಿದವನು. ಎರಡನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ, ನನ್ನ ಸಹೋದರಿ ಜೊತೆ ಒಂದೂವರೆ ಕಿ.ಮೀ ದೂರದ ಶಾಲೆಗೆ ಹೋಗುತ್ತಿದ್ದೆವು. ನಮ್ಮ ತಂದೆಯೂ ಮೇಲ್ಮನೆ ಸದಸ್ಯರಾಗಿದ್ದವರೇ ಆದರೂ ನಮಗೆ ನೀವು ಯಾರ ಮನೆಗೂ ಹೋಗಬಾರದೆಂದು ತಾಯಿ ಹೇಳಿದ್ದರು. ನಮಗೆ ನೀರುಕೊಡಲು ಒಬ್ಬ ಅಟೆಂಡರ್ಗೆ ಹೇಳಿದ್ದರು. ಆದರೂ ಮೇಲ್ವರ್ಗದವರ ಮನೆಗಳಲ್ಲಿ ದೂರ ನಿಂತು ಎತ್ತರದಿಂದ ನೀರು ಹಾಕಿದ್ದನ್ನು ಬೊಗಸೆಯೊಡ್ಡಿ ಕುಡಿದಿದ್ದೇನೆ. ಆ ನೋವು ಈಗಲೂ ನನಗೆ ಕಾಡುತ್ತಿದೆ. ಹೇರ್ ಕಟಿಂಗ್ಗೆ ಹೋದರೆ ಸಲೂನ್ ಹೊರಗೆ ಕೂರಿಸಿ ಹೇರ್ ಕಟ್ ಮಾಡುತ್ತಿದ್ದರು. ಆ ನೋವೂ ಈಗಲೂ ಹಾಗೆ ಇದೆ. ಅಂಬೇಡ್ಕರ್ ಸಹ ಇಂಥ ಎಷ್ಟೋ ಅಪಮಾನ ಅನುಭವಿಸಿ ಬಂದವರು ಎಂದು ಬೇಸರದಿಂದಲೇ ನುಡಿದರು.
ಸಂವಿಧಾನಕ್ಕೆ ಸರಿಸಾಟಿಯಾದ ಕಾನೂನು ಇಡೀ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಕಾವೇರಿ ವಿವಾದ 1924 ರಿಂದ ಮೊನ್ನೆವರೆಗೂ ಇತ್ತು. ಕೃಷ್ಣಾ, ಮಹದಾಯಿ ವಿವಾದಗಳೂ ಇವೆ. ಈ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರ ಇದೆ. ಸಂವಿಧಾನ ಸದ್ಬಳಕೆ ಸರಿಯಾಗಿ ಆಗಿದ್ದರೆ ಕಾವೇರಿ ವಿವಾದ ಯಾವಾಗಲೋ ಬಗೆಹರಿದಿರುತಿತ್ತು ಎಂದರು.
ಮಾತಿನ ಜಟಾಪಟಿ: ಬಿಜೆಪಿಯಿಂದ ಅಲ್ಪಸಂಖ್ಯಾತರು ಯಾರೂ ಆಯ್ಕೆ ಆಗಿಲ್ಲ ಎಂದು ಪರಮೇಶ್ವರ್ ಹೇಳಿದಾಗ, ಮಧ್ಯಪ್ರವೇಶಿಸಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಯಿಂದ ಮುಸಲ್ಮಾನರನ್ನು ದೂರ ಇಡುವ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಿದ್ದೀರಿ. ಅವರು ಬಿಜೆಪಿ ಬಗ್ಗೆ ಹೊಂದಿರುವ ಭ್ರಮೆಯಿಂದ ಹೊರಬಂದಾಗ ಅವರಿಗೂ ಟಿಕೆಟ್ ಸಿಗುತ್ತದೆ ಎಂದರು. ನಾವು ಆಯ್ಕೆಯಾಗಿರುವ ಅಷ್ಟೂ ಜನರೂ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆದು ಕಾರ್ಯಕರ್ತರಾಗಿ ದುಡಿದ ಮೇಲೆ ಟಿಕೆಟ್ ಪಡೆದಿದ್ದು ಎಂದು ಈಶ್ವರಪ್ಪ ಹೇಳಿದಾಗ, ಹಾಗಾದರೆ ಉಪಚುನಾವಣೆಯಲ್ಲಿ ಟಿಕೆಟ್ ಕೊಟ್ಟವರು ಕಸ ಹೊಡೆದಿದ್ರಾ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಹೆಚ್.ಕೆ. ಪಾಟೀಲ್ ಪ್ರಶ್ನಿಸಿದರು.