ಬೆಂಗಳೂರು : ಸಿಎಂ ಬೊಮ್ಮಾಯಿ, ಬಿಜೆಪಿ, ಭಜರಂಗದಳ, ಪಿಎಫ್ಐ, ಸಿಎಫ್ಐ ಈ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಬ್ಬ ಸಚಿವರ ಮೇಲೆ ಆಪಾದನೆ ಬಂದಿದೆ. 40% ಕಮಿಷನ್ ಪಡೀತಿದಾರೆ ಅಂತಾ ಆರೋಪ ಬಂದಿದೆ. ಅವರ ಮೇಲೆ ಕ್ರಮಕೈಗೊಳ್ಳಲಾಗದಷ್ಟು ಸಿಎಂ ವೀಕ್ ಆಗಿದ್ದಾರೆ. ಈಗ ಒಬ್ಬ ಬಿಜೆಪಿ ಕಾರ್ಯಕರ್ತ ಡೆತ್ ನೋಟ್ ಬರೆದಿಟ್ಟು ಹೋಗಿದ್ದಾರೆ. ಯಾಕೆಂದರೆ, ಅವರ ವಿರುದ್ಧ ಕಿರುಕುಳ ಹೆಚ್ಚಾಯ್ತು. ಹೀಗಾಗಿ, ಅವರು ಡೆತ್ ನೋಟ್ ಬರೆದಿಟ್ಟು ಹೋಗಿದ್ದಾರೆ ಎಂದರು.
ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಹೊಸ ಡೆಸಿಬಲ್ ಲೆವೆಪ್ ಸೆಟ್ ಮಾಡ್ತಿದೆ. ನಿತ್ಯ ಸಿಎಂ ಬೊಮ್ಮಾಯಿ ಕೋಮು ವಿಚಾರಗಳ ಹಿಂದೆ ಅಡಗಿ ಕುಳಿತುಕೊಳ್ಳುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಬಿಜೆಪಿ, ಭಜರಂಗದಳ ಮೂರೂ ಸಹ ಪಿಎಫ್ಐ, ಸಿಎಫ್ಐ ಜೊತೆ ಕೈಜೋಡಿಸಿ ಈ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿವೆ. ಕೆಲವರು ಬೇಲ್ ಮೇಲಿದ್ದಾರೆ, ಇನ್ನೂ ಕೆಲವರು ಬೇಲ್ನ ನಿರೀಕ್ಷೆಯಲಿದ್ದಾರೆ. ಅವರೆಲ್ಲರನ್ನೂ ವಜಾ ಮಾಡಬೇಕು. ಇಲ್ಲದಿದ್ದರೆ ಸಿಎಂ ಬೊಮ್ಮಾಯಿ ರಾಜೀನಾಮೆ ಕೊಟ್ಟು ಹೋಗಬೇಕು ಎಂದರು.
ಕೇವಲ ಈಶ್ವರಪ್ಪನವರನ್ನು ಮಾತ್ರ ವಜಾ ಮಾಡೋದಲ್ಲ. ಮುಖ್ಯಮಂತ್ರಿಯೇ ರಾಜೀನಾಮೆ ಕೊಡಬೇಕು. ಈ ಸರ್ಕಾರದ ಎಲ್ಲಾ ಕಳಂಕಿತ ಸಚಿವರು ತೊಲಗಬೇಕು ಎಂದು ಇದೇ ಸಂದರ್ಭದಲ್ಲಿ ಸುರ್ಜೇವಾಲಾ ಒತ್ತಾಯಿಸಿದರು. ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಡೆತ್‌ನೋಟ್ ವಿಚಾರವಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಮಾತನಾಡಿ, ಈ ಪ್ರಕರಣದ ಸತ್ಯಾಸತ್ಯತೆ ನನಗೆ ತಿಳಿದಿಲ್ಲ. ಈ ಪ್ರಕರಣದಲ್ಲಿ ಗೃಹ ಸಚಿವರು ಹಾಗೂ ಸಿಎಂ ಕ್ರಮಕೈಗೊಳ್ಳಬೇಕು ಎಂದರು.
ಇದನ್ನೂ ಓದಿ: ನೀರಾವರಿ ಯೋಜನೆಗಳನ್ನು ಜಾರಿಗೆ ತರದಿದ್ದರೆ ಜೆಡಿಎಸ್ ವಿಸರ್ಜನೆ.. ಚಾಮುಂಡಿ ಬೆಟ್ಟದಲ್ಲಿ ಹೆಚ್ಡಿಕೆ ಶಪಥ