ಬೆಂಗಳೂರು: ಕಾವೇರಿ ಕೂಗಿನ ವಿಚಾರವಾಗಿ ಇಶಾ ಫೌಂಡೇಶನ್‌ನ ಸದ್ಗುರು, ಜಗ್ಗಿ ವಾಸುದೇವ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚೆ ನಡೆಸಿದರು.
ಚರ್ಚೆಯ ಬಳಿಕ ಮಾತನಾಡಿದ ಜಗ್ಗಿ ವಾಸುದೇವ್, ಮರ ವ್ಯವಸಾಯ ಮಾಡುವುದಕ್ಕೆ ರೈತರಿಗೆ ಪ್ರೋತ್ಸಾಹ ಧನ ಬೇಕಾಗುತ್ತದೆ, ಇದಕ್ಕೆ ಮುಖ್ಯಮಂತ್ರಿ ಸಹ ಪ್ರೋತ್ಸಾಹ ಧನ ನೀಡುವುದಕ್ಕೆ ಆದೇಶವನ್ನು ನೀಡಿದ್ದಾರೆ. ಬೆಳೆದ ಮರವನ್ನು ಕಟಾವು ಮಾಡಿ ಮಾರಾಟ ಮಾಡಬಹುದು. ಇದಕ್ಕೆ ಕೇಂದ್ರ ಒಪ್ಪಿದೆ. ಕಾವೇರಿ ಕೂಗನ್ನು ಜನರ ಹೋರಾಟ ಮಾಡಲು ಎಲ್ಲಾ ಪಂಚಾಯತ್ ಸದಸ್ಯರ ಜೊತೆ ಸಭೆ ನಡೆಸಲಾಗುವುದು. 54 ತಾಲೂಕಿನಲ್ಲಿ 500 ರೈತರು ಮರ ವ್ಯವಸಾಯ ಮಾಡಿದರೆ ಅವರ ಆರ್ಥಿಕ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೊತೆಗೆ ಅರಣ್ಯ ಇಲಾಖೆ ಸಹ ಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದು, ಯಾವ ರೀತಿಯ ತಳಿಯ ಮರಗಳು ಬೇಕೋ ಅದನ್ನು ಇಲಾಖೆ ನೀಡುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ. ಇದರಿಂದ ನಮಗೆ ಹೊರೆ ಕಡಿಮೆ ಆಯಿತು, ಈ ಹಿಂದೆ ನಾವು ತಮಿಳುನಾಡು ರೈತರಿಗೆ ಹೇಗೆ ಅನುಕೂಲ ಮಾಡಿಕೊಟ್ಟಿದ್ದೆವೋ ಅದೇ ರೀತಿ ಕರ್ನಾಟಕದಲ್ಲಿ ಟ್ರೈನಿಂಗ್ ಕೇಂದ್ರ ತೆರೆಯಲಾಗುವುದು. ಇದಕ್ಕೂ ಮುಖ್ಯಮಂತ್ರಿ ಒಪ್ಪಿದ್ದು, ಇದರಿಂದ ನಮ್ಮ ನೀರು ಹಾಗೂ ಮಣ್ಣಿನ ಸ್ಥಿತಿ ಗುಣಮಟ್ಟ ವೃದ್ಧಿಸುತ್ತದೆ ಎಂದರು.