ಬೆಂಗಳೂರು: ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅಲ್ಲಿ ನಕಲಿ ಎಂಬುದು ಕಾಡದಿರುವುದಿಲ್ಲ. ತಿನ್ನುವ ಆಹಾರದಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲೂ ಅದು ಸೇರಿಕೊಂಡಿದೆ.
ಪ್ರಮುಖವಾಗಿ ಆರೋಗ್ಯ ವಿಷಯಕ್ಕೆ ಬಂದಾಗ ನಕಲಿ ಹಾಗೂ ಕಳಪೆ ಔಷಧದ ಜೊತೆಗೆ ನಕಲಿ ವೈದ್ಯರ ಹಾವಳಿಯೂ ಹೆಚ್ಚಾಗಿದೆ. ನಕಲಿ ಪದವಿ ಪಡೆದು, ಹಣ ಮಾಡುವಾಸೆಗೆ ಬೀಳುವ ನಕಲಿ ವೈದ್ಯರು ಸುಲಭ ಸಂಪಾದನೆಗೆ ಮುಂದಾಗಿದ್ದಾರೆ. ಈ ರೀತಿಯ ನಕಲಿ ವೈದ್ಯರ ಹಾವಳಿ ರಾಜ್ಯದಲ್ಲಿ ಬೇರೂರಿದ್ದು, ಗ್ರಾಮಾಂತರ ಭಾಗದಲ್ಲೇ ಅಂತಹವರ ಆಟ ಜೋರಾಗಿದೆ.
ಇದನ್ನೂ ಓದಿ...ವೈದ್ಯಕೀಯ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯಾದ್ಯಂತ ಅಂಧತ್ವ ನಿವಾರಣೆ ಕಾರ್ಯಕ್ರಮ: ಸಚಿವ ಸುಧಾಕರ್
ಮೂಲ ಸೌಕರ್ಯ ಕೊರತೆ, ಹೊಣೆಗಾರಿಕೆ ಇಲ್ಲದೇ ಇರುವುದು ನಕಲಿ ವೈದ್ಯರ ಸೃಷ್ಟಿಗೆ ಪ್ರಮುಖ ಕಾರಣ ಎಂದು ವೈದ್ಯ ಹಾಗೂ ಐಎಂಎ ಮಾಜಿ ಅಧ್ಯಕ್ಷ ಮುಧುಸೂದನ್ ಹೇಳಿದರು.
ನಾಯಿ ಕೊಡೆಗಳಂತೆ ಬೆಳೆದಿರುವ ನಕಲಿ ವೈದ್ಯರ ತಡೆಗೆ ಪ್ರಬಲವಾದ ಕಾಯ್ದೆ ಇಲ್ಲ. ಕೆಪಿಎಂಇ, ಕೆಎಂಸಿ ಕಾಯ್ದೆಗಳಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕಾಯ್ದೆಗಳು ಕೇವಲ ಅಸಲಿ ವೈದ್ಯರನ್ನು ಹೆದರಿಸಲು ಇವೆಯೇ ಹೊರತು ಬೇರೆ ಯಾವುದಕ್ಕೂ ಸಕ್ರಿಯವಾಗಿಲ್ಲ ಎಂದು ವಿಷಾದಿಸಿದರು.
ನಕಲಿ ವೈದ್ಯರ ನಿರ್ಮೂಲನೆಗೆ ಬೇಕಿದೆ ರಾಜಕೀಯ-ಕಾನೂನು ಬೆಂಬಲ
ನಕಲಿ ವೈದ್ಯರು ಸಿಕ್ಕಾಗ ಸರಿಯಾದ ರೀತಿಯಲ್ಲಿ ಶಿಕ್ಷೆ ಕೂಡಿಸುವ ಕೆಲಸವಾಗಬೇಕು. ಅಂತಹ ಪ್ರಕರಣಗಳು ಆಗದಂತೆ ಎಚ್ಚರ ವಹಿಸುವುದು ಹಾಗೂ ತಾರ್ಕಿಕ ಅಂತ್ಯಕ್ಕೆ ತಂದು ಶಿಕ್ಷೆ ನೀಡಬೇಕು. ಈ ಕಾರ್ಯಕ್ಕೆ ರಾಜಕೀಯ ಮತ್ತು ಕಾನೂನಿನ ಬೆಂಬಲ ಬೇಕಿದೆ. ಹೀಗಾಗಿ ಈ ನಕಲಿ ಸಂತತಿ ನಿರ್ಮೂಲನೆಯಾಗಿ ಆರೋಗ್ಯ ಕರ್ನಾಟಕ ನಿರ್ಮಾಣವಾಗಬೇಕು ಎಂಬುದೇ ನಮ್ಮ ಕಳಕಳಿ ಎಂದರು.