ಬೆಂಗಳೂರು: ಪೋಷಕರು ಬಾಲ ನ್ಯಾಯ (ಮಕ್ಕಳ ಆರೈಕೆ, ರಕ್ಷಣೆ) ಕಾಯ್ದೆ-2015ರ ಅಡಿ ತಮ್ಮ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಒಪ್ಪಿಸುವ ಪ್ರಕರಣಗಳಲ್ಲಿ ತನಿಖೆ ಮತ್ತು ಕೌನ್ಸೆಲಿಂಗ್ ನಡೆಸಲು ಅಗತ್ಯವಿರುವ ನಿಯಮಗಳ ಕರಡು ಪ್ರಕಟಿಸಿದ್ದೇವೆಂದು ರಾಜ್ಯಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಅವಿವಾಹಿತ ಜೋಡಿ ಸಹಜೀವನ ನಡೆಸಿದ್ದರ ಪರಿಣಾಮ ಜನಿಸಿದ್ದ ತಮ್ಮ 12 ದಿನಗಳ ಮಗುವನ್ನು ಸಿಡಬ್ಲ್ಯೂಸಿಗೆ ಒಪ್ಪಿಸಿದ್ದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವರದಿಯನ್ನಾಧರಿಸಿ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಕುರಿತಂತೆ ವರದಿ ಸಲ್ಲಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪೋಷಕರು ತಮ್ಮ ಮಕ್ಕಳನ್ನು ಸಿಡಬ್ಲ್ಯೂಸಿಗೆ ಒಪ್ಪಿಸುವ ಸಂದರ್ಭದಲ್ಲಿ ತನಿಖೆ ಮತ್ತು ಕೌನ್ಸೆಲಿಂಗ್ ನಡೆಸಲು ಅನುಸರಿಸಬೇಕಾದ ನಿಯಮಗಳ ಕುರಿತು 'ಕರ್ನಾಟಕ ರಾಜ್ಯ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ನಿಯಮಗಳು-2022' ಅನ್ನು ರೂಪಿಸಲಾಗಿದೆ. 2022ರ ಏಪ್ರಿಲ್ 9ರಂದು ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ, ಸಲಹೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನ ಕಾಲಾವಕಾಶ ನೀಡಲಾಗಿದೆ. ಸಲಹೆ, ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಪರಿಶೀಲಿಸಿ ನಿಯಮಗಳನ್ನು ಅಂತಿಮಗೊಳಿಸಲಾಗುವುದು, ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ: ಬೆಂಗಳೂರು ವಿವಿ: ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಹಿಂಪಡೆದ ಸರ್ಕಾರದ ಆದೇಶಕ್ಕೆ ತಡೆ
ಪ್ರಕರಣದಲ್ಲಿ ಸಿಡಬ್ಲ್ಯೂಸಿಗೆ ಒಪ್ಪಿಸಿದ್ದ ಮಗುವನ್ನು ದತ್ತು ಪಡೆಯಲು ಬೇರೊಂದು ದಂಪತಿ ಮುಂದೆ ಬಂದಿತ್ತು. ಅದರಂತೆ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಆ ದಂಪತಿಗೆ ಮಗುವನ್ನು ದತ್ತು ನೀಡಲಾಗಿದೆ ಎಂದು ತಿಳಿಸಿದರು. ವರದಿ ದಾಖಲಿಸಿಕೊಂಡ ಪೀಠ ಶೀಘ್ರ ನಿಯಮಗಳನ್ನು ಅಂತಿಮಗೊಳಿಸಿ ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.