ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ರೈಲು ಕಾಮಗಾರಿ ಚುರುಕುಗೊಂಡಿದ್ದು, ವೇಗವಾಗಿ ಕೆಲಸ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ. ಚಿಕ್ಕಜಾಲ ಬಳಿ ಮೊದಲ ಪಿಲ್ಲರ್ ನಿರ್ಮಾಣ ಕಾಮಗಾರಿಯನ್ನು ಜೂನ್ 10ರಂದು ಪ್ರಾರಂಭಿಸಲಾಗಿದ್ದು, ಪಿಲ್ಲರ್ ಮೇಲೆ ಅಳವಡಿಸುವ 'ಯು' ಆಕಾರದ ಗರ್ಡರ್ ನಿರ್ಮಾಣ ಕಾಮಗಾರಿಯನ್ನ ಕೈಗೆತ್ತಿಕೊಳ್ಳಲಾಗಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಅಧಿಕಾರಗಳು ತಿಳಿಸಿದ್ದಾರೆ.
ಕೆ.ಆರ್ ಪುರಂ ಹೆಬ್ಬಾಳ ಮಾರ್ಗದ ಮೂಲಕ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 36.44 ಕಿ.ಮೀ ಉದ್ದದ ಸಿವಿಲ್ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಪ್ಯಾಕೇಜ್‌ಗಳ ಗುತ್ತಿಗೆಯನ್ನು ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಪಡೆದುಕೊಂಡಿದೆ.
2.15 ಲಕ್ಷ ಚದರ ಮೀಟರ್ ಸ್ವಾಧೀನ ಪ್ರಕ್ರಿಯೆ ಪೂರ್ಣ: ಈ ಮಾರ್ಗದ ನಿಲ್ದಾಣಗಳಿಗೆ ಅಗತ್ಯವಿರುವ 2.23 ಲಕ್ಷ ಚದರ ಮೀಟರ್ ಜಾಗದ ಪೈಕಿ 2.15 ಲಕ್ಷ ಚದರ ಮೀಟರ್ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆ.ಆರ್.ಪುರದಿಂದ ಹೆಬ್ಬಾಳ ತನಕದ ಮಾರ್ಗದಲ್ಲಿ ಮರಗಳ ಸ್ಥಳಾಂತರ ಆಗಬೇಕಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
150 ಟನ್ ತೂಕದ ಎರಡು ಗರ್ಡರ್: ಟಿನ್ ಫ್ಯಾಕ್ಟರಿ ಬಳಿ ಉಕ್ಕಿನ ಗರ್ಡರ್ ಅಳವಡಿಕೆ ಕಾಮಗಾರಿಯೂ ಚುರುಕಿನಿಂದ ನಡೆಯುತ್ತಿದ್ದು, ಉಕ್ಕು ಮತ್ತು ಕಬ್ಬಿಣದಿಂದ ತಯಾರಿಸಿದ ಸುಮಾರು 150 ಟನ್ ತೂಕದ ಎರಡು ಗರ್ಡರ್ಗಳನ್ನು ಅಳವಡಿಸಲಾಗಿದೆ.
ದೊಡ್ದ ಕ್ರೇನ್ ಬಳಸಿ ಗರ್ಡರ್ ಅಳವಡಿಕೆ: ಸಾಮಾನ್ಯವಾಗಿ ದೊಡ್ಡ ರಸ್ತೆ ಅಥವಾ ಸೇತುವೆಗಳ ನಿರ್ಮಾಣದ ವೇಳೆ ಈ ರೀತಿಯ ಉಕ್ಕಿನ ಗರ್ಡರ್ಗಳನ್ನು ಅಳವಡಿಸಲಾಗುತ್ತದೆ. ಈ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿಡಿ ಇಂಡಿಯಾ ಕಂಪನಿಯು ಸಿಮೆಂಟೇಷನ್ ಸರ್ವೀಸ್‌ನಿಂದ ದೊಡ್ಡ ಕ್ರೇನ್‌ಗಳನ್ನು ಬಳಸಿ ಈ ಗರ್ಡರ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.