ಬೆಂಗಳೂರು : ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನಾಗರಭಾವಿಯಲ್ಲಿ ಖಾಸಗಿ ಪ್ರಯೋಗಾಲಯ ನಡೆಸುತ್ತಿರುವ ಕೋವಿಡ್-19 ಪರೀಕ್ಷೆ ನಿಲ್ಲಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಅರ್ಜಿದಾರರು ಬಿಬಿಎಂಪಿಗೆ ದೂರು ಸಲ್ಲಿಸುವಂತೆಯೂ ಮತ್ತು ಪಾಲಿಕೆ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.
ಈ ಕುರಿತು ನಾಗರಭಾವಿ ನಿವಾಸಿಗಳಾದ ಎಸ್ ಗಂಗಪ್ಪ ಮತ್ತು ಶಿವಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ನಾಗರಭಾವಿ ಸಮೀಪದ ಕೇಂದ್ರ ಉಪಾಧ್ಯಾಯರ ಸಂಘ ಬಡಾವಣೆಯಲ್ಲಿರುವ ಮೆಡಿಕಲ್ ಡಯಾಗ್ನೋಸ್ಟಿಕ್ಸ್ ಅಂಡ್ ಸ್ಪೆಷಾಲಿಟಿ ಸೆಂಟರ್ ಎನ್ನುವ ಖಾಸಗಿ ಪ್ರಯೋಗಾಲಯವು ಕೋವಿಡ್-19 ಪರೀಕ್ಷೆ ನಡೆಸುತ್ತಿದೆ. ಆದರೆ, ಪ್ರಯೋಗಾಲಯದಲ್ಲಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.
ಇದರಿಂದ ಸುತ್ತಲಿನ ಪ್ರದೇಶ ಹಾಗೂ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತೆರಳುವ ಜನರಿಗೆ ಸೋಂಕು ಹರಡಲಿದೆ. ಹೀಗಾಗಿ ಕೂಡಲೇ ಪರೀಕ್ಷೆ ನಡೆಸುವುದನ್ನು ನಿಲ್ಲಿಸುವಂತೆ ಪ್ರಯೋಗಾಲಯಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಖಾಸಗಿ ಪ್ರಯೋಗಾಲಯ ಕೋವಿಡ್-19 ಪರೀಕ್ಷೆ ನಡೆಸುವುದನ್ನು ನಿಲ್ಲಿಸುವಂತೆ ಆದೇಶಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ.
ಒಂದೊಮ್ಮೆ ಪ್ರಯೋಗಾಲಯವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಅಥವಾ ಅನುಸರಿಸುತ್ತಿಲ್ಲ ಎನ್ನುವುದಾದ್ರೆ ಆ ಕುರಿತು ಬಿಬಿಎಂಪಿಗೆ ಮನವಿ ಸಲ್ಲಿಸಿ. ನಿಮ್ಮ ಮನವಿ ಪತ್ರವನ್ನು ಪರಿಶೀಲಿಸಿ, ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಲಿ ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.