ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಬಿ ವಿಚಾರಣೆ ಮುಗಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊರಬಂದಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಇಂದು ನಾನು ಬಂದಿದ್ದು ಸಿಸಿಬಿಯವರು ನೀಡಿದ ನೋಟಿಸ್ ಮೇರೆಗೆ. ವಿಚಾರಣೆ ವೇಳೆ 10-15 ಜನರ ಹೆಸರು ಹೇಳಿದ್ದು, ಅಶ್ಲೀಲ ವಿಡಿಯೋ ಸಂದೇಶ ಹಾಗೂ ಕೆಲ ದಾಖಲೆಗಳನ್ನ ನೀಡಿದ್ದೇನೆ. ಸದ್ಯ ನನಗೆ ಗೊತ್ತಿರುವ ಹಲವಾರು ಮಾಹಿತಿಗಳನ್ನ ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದು, ಪೊಲೀಸರಿಗೆ ಕೂಡ ನಾನು ಕೊಟ್ಟ ದಾಖಲೆಗಳು ಉಪಯೋಗವಾಗಲಿದೆ ಎಂದರು.
ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಖ್ಯಾತ ನಟ ನಟಿಯರ ಹೆಸರುಗಳನ್ನು ಇಲ್ಲಿ ಹೇಳಲು ಇಷ್ಟ ಪಡಲ್ಲ. ನಾನು ಬಂದಿರೋದು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ. ಇತ್ತೀಚೆಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ಗೆ ಅಡಿಕ್ಟ್ ಆಗ್ತಿದ್ದಾರೆ. ಸಮಾಜದಲ್ಲಿ ಡ್ರಗ್ಸ್ ಅನ್ನೋದು ಯುವಜನರನ್ನ ಹಾಳು ಮಾಡಿದೆ. ಸಮಾಜದಲ್ಲಿ ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಅರಿವಿರಬೇಕು. ಈ ಬಗ್ಗೆ ಎಲ್ಲರಿಗೂ ಸಂದೇಶ ಹೋಗಬೇಕು. ಡ್ರಗ್ಸ್ ಮಾಫಿಯಾವನ್ನ ಅಷ್ಟು ಸುಲಭವಾಗಿ ತಡೆಯಲು ಖಂಡಿತ ಸಾಧ್ಯವಿಲ್ಲ. ಆದರೆ ತನಿಖಾಧಿಕಾರಿಗಳಿಗೆ ನೀಡಬೇಕಾದ ವಿಚಾರವನ್ನು ತಲುಪಿಸಿದ್ದೇನೆ ಎಂದರು.
ಈಗ ಚಿತ್ರರಂಗಕ್ಕೆ ಬರುವ ನಟ-ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ. ಡ್ರಗ್ಸ್ ಪ್ರಕರಣದ ತನಿಖೆಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಅರಿವು ಮತ್ತು ಹೆದರಿಕೆ ಇರಬೇಕು. ಎಲ್ಲಾ ವಿಚಾರ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ರೆ ತನಿಖೆಗೆ ತೊಂದರೆ ಆಗುತ್ತೆ ಎಂದು ಇಂದ್ರಜಿತ್ ಹೇಳಿದ್ರು.
ಚೀರಂಜೀವಿ ಸರ್ಜಾ ವಿಚಾರದ ಬಗ್ಗೆ ಮಾತನಾಡಿದ್ದೆ. ಆ ವಿಚಾರವನ್ನ ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಮೃತರ ಬಗ್ಗೆ ಮಾತನಾಡುವುದು ಬೇಡ. ಅವರ ಬಗ್ಗೆ ಸಿಂಪತಿ ಇರುತ್ತೆ. ಚಿರಂಜೀವಿ ಇದ್ದಿದ್ರೆ ಮೇಘನಾ ಖುಷಿಯಾಗಿ ಇರುತ್ತಿದ್ದರು ಎಂದು ಇಂದ್ರಜಿತ್ ಇಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ರವಿ ಬೆಳಗೆರೆ ಹೇಳಿಕೆಗೆ ಟಾಂಗ್ ಕೊಟ್ಟ ಇಂದ್ರಜಿತ್, ಕೆಲವರಿಗೆ ಭಾಷೆ ಗೊತ್ತಿಲ್ಲ. ಅಂತವರಿಗೆ ನಾನು ಉತ್ತರ ಕೊಡಲ್ಲ. ಸುಪಾರಿ ಕೊಟ್ಟ ಪತ್ರಕರ್ತನ ಬಗ್ಗೆ ನನಗೆ ಮಾತನಾಡೋಕೆ ಇಷ್ಟವಿಲ್ಲ ಎಂದರು.