ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಲಾಕ್‌ಡೌನ್ 4.O ರಾಜ್ಯದಲ್ಲಿ ಹೇಗಿರಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸುತ್ತಿರುವ ಸಿಎಂ, ವಲಯವಾರು ವರ್ಗೀಕರಣ, ಅದಕ್ಕನುಗುಣವಾಗಿ ಸಡಿಲಿಕೆ ಸಂಬಂಧ ಸಮಾಲೋಚನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಬಹುತೇಕ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ.
ಅದರಂತೆ ಮುಂದಿನ ಹಂತದ ಲಾಕ್‌ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಮಂಗಳವಾರದಿಂದ ರಾಜ್ಯದಲ್ಲಿ ಶೇ. 75-80ರಷ್ಟು ವಾಣಿಜ್ಯ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್, ಕ್ಯಾಬ್ಗಳ ಸಂಚಾರಕ್ಕೆ ನಿರ್ಬಂಧಿತ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ. ರೆಡ್, ಆರೆಂಜ್, ಗ್ರೀನ್ ಝೋನ್ ವರ್ಗೀಕರಣದ ಅಧಿಕಾರವನ್ನು ರಾಜ್ಯಗಳಿಗೆ ನೀಡಿರುವುದರಿಂದ, ರಾಜ್ಯ ಸರ್ಕಾರ ಕಂಟೇನ್ಮೆಂಟ್ ಪ್ರದೇಶಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ವಲಯವಾರು ವರ್ಗೀಕರಣ ಅಧಿಕಾರ ರಾಜ್ಯಕ್ಕೆ ನೀಡಿರುವುದರಿಂದ ರೆಡ್ ಝೋನ್ನಲ್ಲಿರುವ ಬೆಂಗಳೂರಲ್ಲಿ ಕಂಟೇನ್ಮೆಂಟ್ ಪ್ರದೇಶ ಬಿಟ್ಟು ಉಳಿದೆಲ್ಲಾ ಪ್ರದೇಶಗಳನ್ನು ಗ್ರೀನ್ ಝೋನ್ ಎಂದು ಪರಿಗಣಿಸುವ ಸಾಧ್ಯತೆ ಇದೆ. ಆ ಮೂಲಕ ಬೆಂಗಳೂರಿನಲ್ಲಿ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆ ಮಾಡಲು ಸಿಎಂ ನಿರ್ಧರಿಸಲಿದ್ದಾರೆ.
ಸಭೆಯಲ್ಲಿ ಡಿಸಿಎಂಗಳಾದ ಅಶ್ವತ್ಥ್ ನಾರಯಣ್, ಲಕ್ಷ್ಮಣ ಸವದಿ, ಗೃಹ ಸಚಿವ ಬೊಮ್ಮಾಯಿ ಸೇರಿದಂತೆ ಸಂಪುಟದ ಸಚಿವರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.