ಬೆಂಗಳೂರು: ಶಾಲೆ ಮತ್ತು ಕಾಲೇಜು ಪಠ್ಯ ಪುಸ್ತಕದಲ್ಲಿ ಸಹಕಾರಿ ಕ್ಷೇತ್ರದ ಪ್ರಮುಖ ಅಂಶಗಳನ್ನು ಅಳವಡಿಸುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಿಎಂಗೆ ಪತ್ರ ಬರೆದಿದ್ದಾರೆ.

ದೇಶದ ಅಭ್ಯುದಯಕ್ಕೆ, ರಾಜ್ಯದ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಸಹಕಾರಿ ಕ್ಷೇತ್ರದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ, ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೃಷಿ ಮಾರುಕಟ್ಟೆ ಸಮಿತಿ ಮತ್ತು ಕೃಷಿ ಸಹಕಾರ ಮಾರಾಟ ಮಂಡಳಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಹಕಾರ ಇಲಾಖೆ ಬಹಳ ವಿಸ್ತಾರವಾಗಿ ತನ್ನ ಬೇರುಗಳನ್ನು ಚಾಚಿರುವ ವಿಚಾರ ತಿಳಿದಿರುವುದು ಸರ್ವವಿದಿತ.
2008ರಲ್ಲಿ ಇಡೀ ವಿಶ್ವದ ಆರ್ಥಿಕತೆ ಕುಸಿತಗೊಂಡಂತಹ ಪರಿಸ್ಥಿತಿಯಲ್ಲಿ ನಮ್ಮ ದೇಶದ ಆರ್ಥಿಕತೆ ಕುಸಿತವಾಗದೇ ಸಮತೋಲನವನ್ನು ಕಂಡುಕೊಂಡಿದ್ದು ನಮ್ಮ ಸಹಕಾರಿ ಕ್ಷೇತ್ರದ ಭದ್ರ ಬುನಾದಿಯಿಂದ. ಕ್ಷೇತ್ರವನ್ನು ಮತ್ತಷ್ಟು ಪ್ರಜ್ವಲಗೊಳಿಸಲು ಬೇರು ಮಟ್ಟದಿಂದ ಸದೃಢಗೊಳಿಸಬೇಕು ಹಾಗೂ ಯುವ ಜನತೆಯಲ್ಲಿ ಇದರ ಅರಿವನ್ನು ಮೂಡಿಸಲು ಇದರ ಬಗ್ಗೆ ಆಳವಾಗಿ ಅಧ್ಯಯನ ನಡೆಸಬೇಕು. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಚಟುವಟಿಕೆಗಳನ್ನು ತಿಳಿಯಲು ಮತ್ತು ಸಹಕಾರಿ ವ್ಯವಸ್ಥೆಯ ವಿಷಯವನ್ನು ಶಾಲಾ, ಕಾಲೇಜು ಪಠ್ಯ ಪುಸ್ತಕದಲ್ಲಿ ಅಳವಡಿಸುವುದರಿಂದ ವಿದ್ಯಾರ್ಥಿ ದಿಸೆಯಿಂದಲೇ ಸಹಕಾರಿ ಜ್ಞಾನವು ಜಾಗೃತಿಯಾಗಿ ಆರ್ಥಿಕ ಸದೃಢತೆಗೆ ಸಹಕರಿಸುತ್ತದೆ ಎಂದು ಮನವಿ ಮಾಡಿದ್ದಾರೆ.